ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದಿರುವ ಕಬ್ಬು ಬೆಳೆಗಾರರ(Sugarcane Farmers) ಆಕ್ರೋಶದ ಜ್ವಾಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಈಗ ಜೈಲ್ ಭರೋಗೆ(Jail Bharo) ಕರೆ ನೀಡಿದ್ದಾರೆ.
ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜಾಣ ಕುರುಡತನದ ವಿರುದ್ಧ ಸಿಡಿದೆದ್ದಿರುವ ಅನ್ನದಾತರು, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಈಗ ‘ಜೈಲ್ ಭರೋ’ ಚಳುವಳಿಯಾಗಿ ಪರಿವರ್ತಿಸಿದ್ದಾರೆ. ನ್ಯಾಯಯುತ ದರಕ್ಕಾಗಿ ಆಗ್ರಹಿಸಿ ಗುರ್ಲಾಪುರದಿಂದ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಕೇಂದ್ರ ಕಾರಾಗೃಹದವರೆಗೆ(Hindalga Jail) ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದಾರೆ.
ಪ್ರಾರಂಭದಲ್ಲಿ ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿಪಡಿಸಬೇಕೆಂದು ರೈತರು ಪಟ್ಟು ಹಿಡಿದಿದ್ದರು. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಹಲವು ಸುತ್ತಿನ ಸಭೆಗಳ ಬಳಿಕ ರೈತರು ಕೊಂಚ ಸಡಿಲಿಕೆ ತೋರಿ, “ಕಾರ್ಖಾನೆ ಮಾಲೀಕರು ಕನಿಷ್ಠ 4,000 ರೂ. ನೀಡಬೇಕು ಹಾಗೂ ಸರ್ಕಾರ 1,000 ರೂ. ಬೆಂಬಲ ಬೆಲೆ ಘೋಷಿಸಬೇಕು” ಎಂದು ಬೇಡಿಕೆ ಇಟ್ಟಿದ್ದರು. ಆದರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಸರ್ಕಾರ ಎರಡೂ ಇದಕ್ಕೆ ಸಮ್ಮತಿಸದ ಕಾರಣ ಮಾತುಕತೆಗಳು ಸಂಪೂರ್ಣ ವಿಫಲಗೊಂಡಿವೆ.
ಗುರ್ಲಾಪುರದಿಂದ ಆರಂಭವಾದ ಪಾದಯಾತ್ರೆ ರಾತ್ರಿಯ ವೇಳೆಗೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮವನ್ನು ತಲುಪಿದೆ. ನೂರಾರು ರೈತರು ಹೆದ್ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಹೆಜ್ಜೆ ಹಾಕುತ್ತಿದ್ದಾರೆ.
ಸರ್ಕಾರ ಕಾರ್ಖಾನೆ ಮಾಲೀಕರಿಂದ ನಮಗೆ ನ್ಯಾಯಯುತ ಬಿಲ್ ಕೊಡಿಸುತ್ತಿಲ್ಲ, ಅತ್ತ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ. ಬದಲಿಗೆ ಡಿ.ಕೆ. ಶಿವಕುಮಾರ್ ಸೇರಿದಂತೆ ಆಡಳಿತ ವರ್ಗ ರಾಜಕಾರಣ ಮಾಡುತ್ತಿದೆ. ರೈತರ ಹಿತ ಕಾಯದ ಈ ಸರ್ಕಾರ ತಕ್ಷಣವೇ ನಮ್ಮನ್ನೆಲ್ಲ ಬಂಧಿಸಿ ಹಿಂಡಲಗಾ ಜೈಲಿಗೆ ತಳ್ಳಲಿ. ಇದು ನಮ್ಮ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟ, ನ್ಯಾಯ ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಎಚ್ಚರಿಸಿದ್ದಾರೆ.
ರೈತರ ಆಕ್ರೋಶದ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾಡಳಿತ, ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೈತ ಮುಖಂಡರ ತುರ್ತು ಸಭೆ ಕರೆಯಲಾಗಿದೆ. ಸರ್ಕಾರ ರೈತರ ಕಣ್ಣೀರು ಒರೆಸಲು ಸೂಕ್ತ ದರ ಪ್ರಕಟಿಸುತ್ತದೆಯೋ ಅಥವಾ ಕಾರ್ಖಾನೆ ಮಾಲೀಕರ ಪರ ವಾಲಲಿದೆಯೋ ಎಂಬುದು ಈ ಸಭೆಯ ಬಳಿಕ ಹೊರಬೀಳಬೇಕಿದೆ.
