ಮೆಲ್ಬೋರ್ನ್: ಆಸ್ಟ್ರೇಲಿಯಾದ(Australia) ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ‘ದಿ ಫೈನಲ್ ವರ್ಡ್’ ಪಾಡ್ಕ್ಯಾಸ್ಟ್ನ ಸಂಚಿಕೆಯಲ್ಲಿ ಮಾತನಾಡಿದ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ವಿಕ್ಟೋರಿಯಾ ಪರ ದೇಶೀಯ 50 ಓವರ್ ಹಾಗೂ ಪ್ರಥಮ ದರ್ಜೆ (ನಾಲ್ಕು ದಿನಗಳ ರೆಡ್ ಬಾಲ್) ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ‘ದಿ ಬಿಗ್ ಶೋ’ ಎಂದೇ ಜನಪ್ರಿಯರಾಗಿದ್ದ 38 ವರ್ಷದ ಮ್ಯಾಕ್ಸ್ವೆಲ್, ಆಸ್ಟ್ರೇಲಿಯಾ ಪರ 149 ಏಕದಿನ, 130 ಟಿ20 ಹಾಗೂ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಅವರು, 2021ರ ಟಿ20 ವಿಶ್ವಕಪ್ ವಿಜಯದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮತ್ತು ವಿಕ್ಟೋರಿಯಾ ತಂಡದ ಪರ 50 ಓವರ್ ಹಾಗೂ ನಾಲ್ಕು ದಿನಗಳ ಕೆಂಪು ಚೆಂಡಿನ ಕ್ರಿಕೆಟ್ಗೆ ಸಂಪೂರ್ಣವಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ವೃತ್ತಿಜೀವನದ ಮುಂದಿನ ಕೆಲವು ಟೂರ್ನಿಗಳಿಗಾಗಿ ದೇಹವನ್ನು ಸಜ್ಜುಗೊಳಿಸಲು ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಸಮಯ ನೀಡುವ ಅಗತ್ಯವಿದೆ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ. ವೃತ್ತಿಜೀವನದಲ್ಲಿ ಉಳಿದಿರುವ ಬೆರಳೆಣಿಕೆಯ ಟೂರ್ನಿಗಳನ್ನು ಯಶಸ್ವಿಯಾಗಿ ಮುಗಿಸಲು ನನ್ನ ಫಿಟ್ನೆಸ್ಗೆ ಹೆಚ್ಚು ಸಮಯ ಮೀಸಲಿಡುವ ಕಾಲ ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
View this post on Instagram
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 3,990 ರನ್ ಹಾಗೂ ಟಿ20 ಕ್ರಿಕೆಟ್ನಲ್ಲಿ 2,897 ರನ್ ಸಿಡಿಸಿರುವ ಮ್ಯಾಕ್ಸ್ವೆಲ್, ಫೆಬ್ರವರಿಯಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್ನ ಒಮಾನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಭಾರತದ ರೋಹಿತ್ ಶರ್ಮಾ ಅವರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕ ಸಿಡಿಸಿದ ವಿಶ್ವದ ಇಬ್ಬರೇ ಆಟಗಾರರಲ್ಲಿ ಮ್ಯಾಕ್ಸ್ವೆಲ್ ಕೂಡ ಒಬ್ಬರಾಗಿದ್ದಾರೆ. ಬ್ಯಾಟಿಂಗ್ ಜತೆಗೆ ತಮ್ಮ ಪರಿಣಾಮಕಾರಿ ಆಫ್-ಸ್ಪಿನ್ ಬೌಲಿಂಗ್ ಮೂಲಕ ಅವರು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ 128 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಕಳೆದ ವರ್ಷವೇ ಏಕದಿನ ಕ್ರಿಕೆಟ್ನಿಂದ ಹಿಂದೆ ಸರಿದಿದ್ದ ಮ್ಯಾಕ್ಸ್ವೆಲ್, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ, ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಅವರ ಆ ಆಸೆ ಕೈಗೂಡಲಿಲ್ಲ.
ತವರು ಮೈದಾನದಲ್ಲಿ ಬೀಳ್ಕೊಡುಗೆ ಸಿಗದ ಬಗ್ಗೆ ಮಾತನಾಡಿದ ಅವರು, “ನನಗೆ ಮೆಲ್ಬೋರ್ನ್ ಮೈದಾನದಲ್ಲಿ ಬೀಳ್ಕೊಡುಗೆ ಪಂದ್ಯ ಸಿಗಬಹುದು ಎಂಬ ಸಣ್ಣ ಆಸೆ ಇತ್ತು. ಆದರೆ ಮಂಡಳಿ ಯುವ ಆಟಗಾರರೊಂದಿಗೆ ತಂಡವನ್ನು ಮುನ್ನಡೆಸುತ್ತಿರುವ ನಿಲುವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ” ಎಂದಿದ್ದಾರೆ.
ವಿಶೇಷವಾಗಿ 2023 ರ ವಿಶ್ವಕಪ್ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ ಅಜೇಯ 201 ರನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಇನ್ನಿಂಗ್ಸ್ ಒಂದಾಗಿದೆ. ಅಫ್ಘಾನಿಸ್ತಾನ ನೀಡಿದ್ದ 292 ರನ್ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಕೇವಲ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.ಅಂತಹ ಕಠಿಣ ಪರಿಸ್ಥಿತಿಯಲ್ಲಿ ಕೇವಲ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಮ್ಯಾಕ್ಸ್ವೆಲ್ ಅಜೇಯ 201 ರನ್ ಚಚ್ಚಿ ಆಸ್ಟ್ರೇಲಿಯಾಕ್ಕೆ ಅನಿರೀಕ್ಷಿತ ಜಯ ತಂದುಕೊಟ್ಟಿದ್ದರು.
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ರನ್ ಚೇಸ್ ಮಾಡುವಾಗ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಪಂದ್ಯದಲ್ಲಿ ಅವರು ತೀವ್ರವಾದ ಕಾಲು ಸೆಳೆತದಿಂದ ಬಳಲುತ್ತಿದ್ದರೂ, ಓಡಲಾಗದ ಸ್ಥಿತಿಯಲ್ಲಿ ನಿಂತಲ್ಲೇ ಸಿಕ್ಸರ್-ಬೌಂಡರಿಗಳನ್ನು ಬಾರಿಸಿ ಇತಿಹಾಸ ಸೃಷ್ಟಿಸಿದ್ದರು.
ऑस्ट्रेलिया के बिस्फोटक बल्लेबाज Glenn Maxwell ने अंतर्राष्ट्रीय क्रिकेट से संन्यास लिया
मैक्सवेल की ये पारी हमेशा याद की जाएगी https://t.co/cm8zWQ2suO
— Jyotsna yadav (jyoti) (@Jyotsna51400) November 3, 2026
ಮ್ಯಾಕ್ಸ್ವೆಲ್ ಕಳೆದ 2025 ಐಪಿಎಲ್ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದರೆ ತಮ್ಮ ಫಿಟ್ನೆಸ್ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಅವರು 2026 ರ ಐಪಿಎಲ್ ಹರಾಜಿನಿಂದ ತಮ್ಮ ಹೆಸರನ್ನು ಹಿಂಪಡೆದು, ಟೂರ್ನಿಯಿಂದ ಹೊರಗುಳಿದಿದ್ದರು
ಗ್ಲೆನ್ ಮ್ಯಾಕ್ಸ್ವೆಲ್ ಅವರು ಭಾರತೀಯ ಮೂಲದ ಫಾರ್ಮಾಸಿಸ್ಟ್ ವಿನಿ ರಾಮನ್ (Vini Raman) ಅವರನ್ನು 2022 ರಲ್ಲಿ ಮದುವೆಯಾಗಿದ್ದರು. 2013 ರ ಸುಮಾರಿಗೆ ಮೊದಲ ಬಾರಿಗೆ ಭೇಟಿಯಾಗಿದ್ದ ಇವರು ದೀರ್ಘಕಾಲದ ಪ್ರೀತಿಯ ನಂತರ, ಮಾರ್ಚ್ 2022 ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ತಮಿಳು ಬ್ರಾಹ್ಮಣ ಮತ್ತು ಕ್ರೈಸ್ತ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು.

