– ನಮ್ಮದೇ ಸರ್ಕಾರ ಇದ್ರೂ ʻಸ್ಟಿಂಗ್ʼ ಕೇಸ್ ಸರಿಯಾಗಿ ಹ್ಯಾಂಡಲ್ ಮಾಡಿಲ್ಲ; ತೀವ್ರ ಬೇಸರ
– ಎಂಎಲ್ಸಿ ಎಲೆಕ್ಷನ್ ಸೋಲಿಗೂ ಸ್ಟಿಂಗ್ ಕಾರಣ; ತೀವ್ರ ಬೇಸರ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನ ದೆಹಲಿಯಲ್ಲಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಸ್ಟಿಂಗ್ ಆಪರೇಷನ್ (Sting Operation) ವಿಡಿಯೋ ವಿಚಾರವಾಗಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಮಾತುಕತೆ ನಡೆಸಿರುವ ಸಿಎಂ, ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸುವಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ನಿಮ್ಮ ಮಾತಿಗೆ ಗೌರವ ನೀಡಿ ರಾಜೀನಾಮೆ ನೀಡಿದೆ. ಮುಂದೆ ಚುನಾವಣೆಯಲ್ಲೂ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿಯೂ ಅಲ್ಲ. ಅದಾಗ್ಯೂ ಈ ರಾಜಕೀಯ ಷ್ಯಡ್ಯಂತ್ರ ನಡೆಸಿದ್ದು ಯಾರು? ವಿಡಿಯೋ ಹಂಚಿಕೊಂಡಿದ್ದು ಯಾರು ಅಂತಾ ನನಗೆ ಗೊತ್ತಿದೆ. ಆದರೆ ವಿಡಿಯೋ ಮಾಡಿದ್ದು ಯಾರು, ಅದರ ಹಿಂದಿನ ಉದ್ದೇಶ ಏನು? ರಾಜೀನಾಮೆ ಬಳಿಕ ನನ್ನ ಹೆಸರಿಗೆ ಏಕೆ ಧಕ್ಕೆ ತರಲಾಗುತ್ತಿದೆ. ಇದರಿಂದ ನನಗೆ ತೀವ್ರ ಬೇಸರವಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಮುಂದಿನ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರಕ್ಕೆ ಬರಬೇಕಾದರೆ ನನ್ನ ಇಮೇಜ್ಗೆ ಧಕ್ಕೆಯಾಗಬಾರದು. ಹೀಗೆ ಧಕ್ಕೆ ಮುಂದುವರಿದರೆ ನಾನು ಪ್ರಚಾರದಿಂದ ದೂರ ಉಳಿಯುತ್ತೇನೆ. ಇತ್ತಿಚೆಗೆ ನಡೆದ ಪರಿಷತ್ನ 4 ಸ್ಥಾನಗಳು ಸೋಲಲು ಸ್ಟಿಂಗ್ ವಿಚಾರವೇ ಕಾರಣ. ವಿಡಿಯೋದಿಂದ ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೆ ತೀವ್ರ ಡ್ಯಾಮೇಜ್ ಆಗಿದೆ. ಈ ರೀತಿಯ ಮಾನ ಹಾನಿ ಸರಿಯಲ್ಲ. ವಿಡಿಯೋ ಹಿಂದಿನವರು ಯಾರು? ಅವರ ಉದ್ದೇಶ ಏನು ಗೊತ್ತಾಗಬೇಕು ಎಂದು ರಾಹುಲ್ ಗಾಂಧಿ ಎದುರು ತೀವ್ರ ಅಸಮಧಾನ ಹೊರಹಾಕಿದ್ದಾರೆ.
ಪ್ರಕರಣದ ನಿರ್ವಹಣೆ ಬಗ್ಗೆಯೂ ಅಸಮಾಧಾನ
ಇದೇ ವೇಳೆ, ಸ್ಟಿಂಗ್ ಆಪರೇಷನ್ ಪ್ರಕರಣವನ್ನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ನಿರ್ವಹಿಸಿದ ರೀತಿಯ ಬಗ್ಗೆಯೂ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.
ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಪ್ರಕರಣದ ತನಿಖೆ ನಡೆದ ರೀತಿ ಸರಿಯಾಗಿಲ್ಲ. ಪ್ರಮುಖ ಆರೋಪಿಗಳು ಜಾಮೀನು ಪಡೆಯುವಂತಾಗಿದೆ. ಪ್ರಮುಖ ಆರೋಪಿಗಳಿಬ್ಬರನ್ನ ಬಂಧಿಸಬೇಕಿತ್ತು, ಆದರೆ ಬಂಧಿಸಿಲ್ಲ. ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

