ಬಾಗಲಕೋಟೆ: ಡಿಸೆಂಬರ್ 8 ರಂದು ನಡೆಯಲಿರುವ ವಿಧಾನಮಂಡಲದ ಅಧಿವೇಶನದ(Belagavi Session) ಸಂದರ್ಭದಲ್ಲಿ ರಾಜ್ಯದ ಎಲ್ಲಾ ರೈತ ಸಂಘಟನೆಗಳು(Farmers Associations) ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ನಡೆಯಲಿರುವ ಬೃಹತ್ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ(Chunappa Pujeri) ಮನವಿ ಮಾಡಿದ್ದಾರೆ.
ಹುನಗುಂದ ತಾಲ್ಲೂಕಿನ ಚಿತ್ತರಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನೂತನ ಸದಸ್ಯರಿಗೆ ಹಸಿರು ಶಾಲು ಹೊದಿಸಿ ದೀಕ್ಷೆ ನೀಡುವ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದ ಅವರು, ರೈತರಿಗೆ ಶಾಶ್ವತ ಸುಖ ಮತ್ತು ಆರ್ಥಿಕ ಭದ್ರತೆ ಸಿಗಬೇಕಾದರೆ ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಬಿಲ್ ಆರಂಭದಲ್ಲೇ ಪ್ರತಿ ಟನ್ಗೆ 3800 ರೂ. ಸಿಕ್ಕಿರುವುದಕ್ಕೆ ಈ ಭಾಗದ ರೈತರಿಗೆ ಸಂತೋಷವಾಗಿದೆ ಎಂದ ಪೂಜೇರಿ, ಸ್ಥಳೀಯ ನೀರಾವರಿ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆದರು.
ಹುನಗುಂದ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸಮರ್ಪಕ ನೀರಾವರಿ ಸೌಲಭ್ಯವಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಮಹದಾಯಿ ಹಾಗೂ ಕಾಳಿ ನದಿಯಿಂದ ಮಲಪ್ರಭಾ ನದಿಗೆ ನೀರು ಲಿಫ್ಟ್ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಜೊತೆಗೆ, ನೆನೆಗುದಿಗೆ ಬಿದ್ದಿರುವ ಮಹದಾಯಿ ಕಾಮಗಾರಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಪೂರ್ಣಗೊಳಿಸಿ ರೈತರಿಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಬೆಂಬಲ ಬೆಲೆ (ಎಂಎಸ್ಪಿ) ಕಾನೂನುಬದ್ಧಗೊಳಿಸುವ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ನವೆಂಬರ್ 26 ರವರೆಗೆ ಗಡುವು ನೀಡಲಾಗಿದ್ದು, ಬೇಡಿಕೆ ಈಡೇರದಿದ್ದರೆ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಸೇರಿದಂತೆ ದೇಶದ 7-8 ರಾಜ್ಯಗಳ ರೈತರೊಂದಿಗೆ ಸೇರಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ಚೂನಪ್ಪ ಪೂಜೇರಿ ಎಚ್ಚರಿಸಿದರು.
