– ಆಶಾ ಕಾರ್ಯಕರ್ತೆಯರು ಸಿಎಂ ಮಾತು ಕೇಳಬೇಕು ಎಂದ ಡಿಸಿಎಂ
ಬೆಂಗಳೂರು: ಬರ ಪರಿಹಾರ (Drought Relief) ಕೇಂದ್ರ ಸರ್ಕಾರ ಬಿಡುಗಡೆ ಮಾಡದೇ ಹೋದ್ರೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡ್ತೀವಿ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ್ (G.Parameshwara) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ನಮ್ಮ ಪತ್ರಗಳಿಗೆ ಕೇಂದ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಕೇಂದ್ರದಿಂದ ನಮಗೆ ಪ್ರತಿಕ್ರಿಯೆ ಬರಲಿಲ್ಲ ಅಂದರೆ ಮುಂದೆ ಏನ್ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಮಾಡ್ತೀವಿ. ಸಿಎಂ ಮತ್ತು ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಏನ್ ತೀರ್ಮಾನ ಬರುತ್ತೋ ಹಾಗೇ ಮಾಡ್ತೀವಿ ಎಂದರು.
ಹಿಂದೆ ನಾವು ಹಣ ಕೊಡದಾಗ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ವಿ. ಅದಕ್ಕೂ ಸ್ಪಂದನೆ ಕೊಡದೇ ಇದ್ದಾಗ ಸುಪ್ರೀಂ ಕೋರ್ಟ್ಗೆ ಹೋದ್ವಿ. ಸುಪ್ರೀಂ ಕೋರ್ಟ್ ಡೈರೆಕ್ಷನ್ ಮೇಲೆ 3,500 ಕೋಟಿ ಕೊಟ್ಟರು. ಈಗ ಅದೇ ರೀತಿ ಆಗುತ್ತೆ ಅಂತ ನಂಬಿಕೊಂಡಿಲ್ಲ. ನಮಗೆ ಕೇಂದ್ರ ಸ್ಪಂದಿಸಬಹುದು. ಇಲ್ಲಿಗೆ ಬಂದ ಕೇಂದ್ರದ ಟೀಂ ವರದಿ ಕೊಟ್ಟಿದೆ. ಕೇಂದ್ರದಲ್ಲಿ ಅಧಿಕಾರಿಗಳ ಸಭೆ ಮಾಡಿ ಚರ್ಚೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 7ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ – ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ
ಬರ ಪರಿಹಾರಕ್ಕೆ ನಾವು 22 ಸಾವಿರ ಕೋಟಿ ಕೇಳಿದ್ದೇವೆ. ಅವರಾಗಿಯೇ ಕೊಟ್ಟರೆ ಸಂತೋಷ. ಈಗಾಗಲೇ ನಾವು ರೈತರಿಗೆ 5 ಸಾವಿರ ಕೊಡೋದಕ್ಕೆ ಶುರು ಮಾಡಿದ್ದೇವೆ. ಸದನ ಪ್ರಾರಂಭ ಆಗುವ ಮುನ್ನ ಅಷ್ಟು ಹಣ ರೈತರಿಗೆ ಕೊಡ್ತೀವಿ. ಸಭೆ ಮಾಡಿ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಪ್ರಕ್ರಿಯೆ ಆಗ್ತಿದೆ. ಇದರಲ್ಲಿ ರಾಜಕಾರಣ ಆಗಬಾರದು ಅಂತ ತಿಳಿಸಿದರು.
ಹೇಳಿ-ಕೇಳಿ ಬರ ಬಂದಿಲ್ಲ. ಈ ಸಮಯದಲ್ಲಿ ಕೇಂದ್ರ ನಮ್ಮ ಜೊತೆ ನಿಲ್ಲಬೇಕು ಸುಮ್ಮನೆ ಅವರ ಮೇಲೆ ನಾವು, ನಮ್ಮ ಮೇಲೆ ಅವರು ಆರೋಪ ಮಾಡೋದು ಸರಿಯಲ್ಲ. ರಾಜಕೀಯ ಯಾವುದರಲ್ಲಿ ಮಾಡಬೇಕೋ ಮಾಡೋಣ.ಬರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ.ರೈತರ ಕಷ್ಟಕ್ಕೆ ನಾವು ಸ್ಪಂದಿಸಬೇಕು.ನಾವು 2500 ಕೋಟಿ ರೈತರಿಗೆ ಕೊಡ್ತಾ ಇದ್ದೇವೆ.ಇದು ಸಣ್ಣ ಹಣ ಅಲ್ಲ ಅಂತ ಕೇಂದ್ರ ಸರ್ಕಾರಕ್ಕೆ ತಿರುಗೇಟು ಕೊಟ್ಟರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆರು ಸಿಎಂ ಅವರ ಮಾತನ್ನ ನಂಬಬೇಕು. ಸಿಎಂ ಅವರು ಈಗಾಗಲೇ ಅವರನ್ನು ಕರೆದು ಮಾತುಕತೆ ಮಾಡಿದ್ದಾರೆ. ಸಮಸ್ಯೆಗಳನ್ನ ನಾನೇ ಬಗೆಹರಿಸುತ್ತೇನೆ ಅಂತ ಆಶ್ವಾಸನೆ ಕೊಟ್ಟಿದ್ದಾರೆ. ನನ್ನನ್ನ ನಂಬಿ ಅಂತ ಹೇಳಿದ್ದಾರೆ. ರಾಜ್ಯದ ಸಿಎಂ ಅವರೇ ಹೇಳ್ತಾರೆ ಅಂದರೆ ಅವರು ಮಾತು ನಂಬಬೇಕು. ಅವರಿಗೆ ನಂಬಿಕೆ ಬರಲಿಲ್ಲ ಅಂದರೆ ಸಮಸ್ಯೆ ಹೇಗೆ ಬಗೆಹರಿಯುತ್ತದೆ ಎಂದು ಪ್ರಶ್ನೆ ಮಾಡಿದರು.
ಸಿಎಂ ಅವರು ನವೆಂಬರ್ 25ರ ಸಂಜೆ ವಿದೇಶಿ ಪ್ರವಾಸದಿಂದ ವಾಪಸ್ ಬರ್ತಾರೆ. ಬಂದ ಮೇಲೆ ಚರ್ಚೆ ಮಾಡಿ ಒಂದು ತೀರ್ಮಾನ ಮಾಡ್ತಾರೆ. ಆಶಾ ಕಾರ್ಯಕರ್ತೆಯರು ಸಿಎಂ ಮಾತು ನಂಬಬೇಕು. ಸಿದ್ದರಾಮಯ್ಯ ಕೂಡಾ ಕೊಟ್ಟ ಮಾತು ಈಡೇರಿಸಿಲ್ಲ ಎಂಬ ವಿಚಾರಕ್ಕೆ ಕೆಲವು ರಾಜಕೀಯ ಬದಲಾವಣೆಗಳು ಆಗಿರೋದು ಇಡೀ ಜಗತ್ತಿಗೆ ಗೊತ್ತು. ಶಿವಕುಮಾರ್ ಅವರು ಸಿಎಂ ಇದ್ದಾರೆ. ಸಿದ್ದರಾಮಯ್ಯ ಕೊಟ್ಟ ಭರವಸೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ತಗೋತಾರೆ. ಅವರು ನಂಬಬೇಕು ಅಷ್ಟೆ ಅಂತ ಪುನರುಚ್ಚಾರ ಮಾಡಿದರು.
ಲಿಖಿತ ರೂಪದಲ್ಲಿ ಕೊಡಿ, ನಾಳೆ ಬೆಳಗ್ಗೆ ಕೊಡಿ, ಸಂಜೆ ಕೊಡಿ ಅಂತ ಹೇಳ್ತಾರೆ. ಪ್ರತಿಭಟನೆ ಮಾಡೋರಿಗೆ ಈ ಭಾಷೆ ಕಾಮನ್. ಅದೆಲ್ಲವನ್ನೂ ನಾವು ಕೇಳಿದ್ದೇವೆ. ಅವರ ಸಮಸ್ಯೆ ಬಗೆಹರಿಯಬೇಕು. ಅವರದ್ದು ನ್ಯಾಯಯುತ ಬೇಡಿಕೆನೇ. ನಾನು ಇಲ್ಲ ಅಂತ ಹೇಳಿಲ್ಲ. ಹೇಗೆ ಬಗೆಹರಿಯಬೇಕು ಅಂತ ಮುಂದೆ ನೋಡಬೇಕು ಎಂದರು. ಇದನ್ನೂ ಓದಿ: ಡಿಸಿಎಂ ಪರಮೇಶ್ವರ್ಗೆ ಹೊಸ ಸರ್ಕಾರಿ ಕಾರು – ಕುಟುಂಬಸ್ಥರಿಂದ ಪೂಜೆ!
ಪ್ರಣಾಳಿಕೆ ಅಧ್ಯಕ್ಷ ಆಗಿ ನೀವೆ ಗೌರವಧನ ಹೆಚ್ಚಳ ಮಾಡೋದಾಗಿ ಸೇರಿಸಿದ್ರಿ ಎಂಬ ಪ್ರಶ್ನೆಗೆ, ಆ ಕಮಿಟ್ಮೆಂಟ್ ಇರೋದಕ್ಕೆ ಸಿದ್ದರಾಮಯ್ಯ ಹೇಳಿದ್ದರು. ಈಗ ಶಿವಕುಮಾರ್ ಹೇಳ್ತಾ ಇದ್ದಾರೆ. ಅದನ್ನ ಬಗೆಹರಿಸುತ್ತೇವೆ. ಆಶಾ ಕಾರ್ಯಕರ್ತೆಯರು ಶಾಂತಿಯಿಂದ ಸಿಎಂ ಅವರನ್ನು ನಂಬಬೇಕು ಎಂದರು.
