ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಧರಣಿ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಲಿಖಿತ ಆದೇಶ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಇಂದು ಫ್ರೀಡಂ ಪಾರ್ಕ್ ಅಕ್ಕಪಕ್ಕದ ಜಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು (ASHA Workers Protest) ಆಕ್ರೋಶ ಹೊರಹಾಕಿದರು.
ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಮಾತನ್ನು ಆಶಾ ಕಾರ್ಯಕರ್ತೆಯರು ಕೇಳಬೇಕು. ಸಿಎಂ ಭರವಸೆ ಕೊಟ್ಟಿದ್ದಾರೆ. ಅವರನ್ನ ನಂಬಬೇಕು. ನವೆಂಬರ್ 25 ಕ್ಕೆ ಸಂಜೆ ಸಿಎಂ ಬೆಂಗಳೂರಿಗೆ ಬರ್ತಾರೆ. ಬಂದ ಬಳಿಕ ಒಂದು ತೀರ್ಮಾನ ಮಾಡ್ತಾರೆ ಎಂದರು. ಸರ್ಕಾರದ ಭರವಸೆಗಳನ್ನ ನಂಬಿ ಹತಾಷರಾಗಿರುವ ಆಶಾ ಕಾರ್ಯಕರ್ತೆಯರು, ಈ ಬಾರಿ ತಮ್ಮ ಬೇಡಿಕೆಗಳಿಗೆ ನ್ಯಾಯ ಸಿಕ್ಕಿದ ಬಳಿಕವೇ ಇಲ್ಲಿಂದ ಹೋಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ – ಫ್ರೀಡಂ ಪಾರ್ಕ್ಗೆ ಮನೆ ಮಂದಿ ಕರೆಸುವುದಾಗಿ ವಾರ್ನಿಂಗ್
ಖುದ್ದು ಸಿಎಂ ಭರವಸೆಗೂ ಆಶಾ ಕಾರ್ಯಕರ್ತೆಯರು ಒಪ್ಪುತ್ತಿಲ್ಲ. ಸ್ಥಳಕ್ಕೆ ಆರೋಗ್ಯ ಸಚಿವರು ಬಂದರೂ ಸರ್ಕಾರದ ಭರವಸೆಗೆ ಹೋರಾಟಗಾರರು ಸೊಪ್ಪು ಹಾಕಿಲ್ಲ. ಈ ಬಾರಿ ಆದೇಶದ ಪ್ರತಿ ಪಡೆದುಕೊಂಡೇ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದು, ಹಂತಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ.
