ನವದೆಹಲಿ: ಏಷ್ಯಾದಲ್ಲಿ ಭಾರತದ (India) ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. 2026ರ ಏಷ್ಯಾ ಪವರ್ ಇಂಡೆಕ್ಸ್ನಲ್ಲಿ (Asia Power Index) ಭಾರತ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ.
ಲೋವಿ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಇದೇ ವೇಳೆ, ಪ್ರಾದೇಶಿಕ ನಾಯಕರ ಪರಿಣಾಮಕಾರಿ ಮೌಲ್ಯಮಾಪನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಮೊದಲ ಸ್ಥಾನದಲ್ಲಿದ್ದಾರೆ.
The 2026 Lowy Institute Asia Power Index is out. It ranks 27 countries and territories across 131 indicators to measure who holds power in Asia. This year’s picture is a precarious one.
Seven key findings: 🧵1/ https://t.co/MLKmmpZqNc
— Hunter Marston (@hmarston4) November 22, 2026
ಲೋವಿ ಇನ್ಸ್ಟಿಟ್ಯೂಟ್, ಒಟ್ಟು 8 ಮಾನದಂಡಗಳನ್ನು ಆಧರಿಸಿ 27 ರಾಷ್ಟ್ರಗಳ ಶಕ್ತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿತ್ತು. ಈ ಪೈಕಿ ಆರ್ಥಿಕ, ಸೇನಾ ಸಾಮರ್ಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಕೊಂಡ ಭಾರತವು 3ನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲ ಹಾಗೂ 2ನೇ ಸ್ಥಾನಗಳನ್ನ ಉಳಿಸಿಕೊಂಡಿವೆ. ಭಾರತದ ರಾಜತಾಂತ್ರಿಕ ಪ್ರಭಾವ, ರಕ್ಷಣಾ ಸಹಕಾರ ಮತ್ತು ಸಾಂಸ್ಕೃತಿಕ ವ್ಯಾಪ್ತಿ ವಿಸ್ತರಣೆಯಾಗಿರುವುದು 3ನೇ ಸ್ಥಾನ ಪಡೆಯಲು ಪ್ರಮುಖ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ.
ಭಾರತದ ಅಂಕ 40.5ಕ್ಕೆ ಏರಿಕೆ
ಏಷ್ಯಾ ಪವರ್ ಇಂಡೆಕ್ಸ್ನಲ್ಲಿ ಭಾರತದ ಒಟ್ಟಾರೆ ಪವರ್ ಪಾಯಿಂಟ್ 40.5ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭಾರತ ಮತ್ತು ಚೀನಾ ನಡುವೆ ಇದ್ದಂತಹ ಸೂಚ್ಯಂಕದ ಅಂತರ ಭಾರೀ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಇನ್ನೂ ರಾಜತಾಂತ್ರಿಕ ಪ್ರಭಾವದಲ್ಲಿ ಭಾರತ 70.3 ಅಂಕ ಗಳಿಸಿದ್ದು, ಇದು ದೇಶದ ಅತ್ಯಂತ ಬಲಿಷ್ಠ ಕ್ಷೇತ್ರವಾಗಿದೆ. ಭವಿಷ್ಯದ ಸಂಪನ್ಮೂಲಗಳ ವಿಭಾಗದಲ್ಲಿ 56.2 ಅಂಕ ಗಳಿಸಿದ್ರೆ, ಆರ್ಥಿಕ ಸಾಮರ್ಥ್ಯದ ವಿಭಾಗದಲ್ಲಿ 26.4 ಅಂಕ ದಾಖಲಿಸಿದೆ.
ಈ ಕುರಿತು ಲೋವಿ ಇನ್ಸ್ಟಿಟ್ಯೂಟ್ನ ಆಗ್ನೇಯ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಹಂಟರ್ ಮಾರ್ಸ್ಟನ್ ಅವರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಭಾರತ 40.5 ಅಂಕಗಳೊಂದಿಗೆ ಪ್ರಮುಖ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಜೊತೆಗೆ ತನ್ನ ಸ್ಥಾನವನ್ನ ಮತ್ತಷ್ಟು ಗಟ್ಟಿಗೊಳಿಸಿದೆ. 2018 ರಿಂದ ಭಾರತ ಮತ್ತು ಚೀನಾ ನಡುವಿನ ಅಂತರ ಅತ್ಯಂತ ಕಡಿಮೆಯಾಗಿದೆ. ಆರ್ಥಿಕ ಸಾಮರ್ಥ್ಯದಲ್ಲಿ ಇಳಿಕೆ ಕಂಡುಬಂದಿದ್ದರೂ, ಪ್ರಧಾನಿ ಮೋದಿ ಅವರು ಕ್ಸಿ ಜಿನ್ಪಿಂಗ್ ನಂತರ 2ನೇ ಅತ್ಯಂತ ಪರಿಣಾಮಕಾರಿ ಪ್ರಾದೇಶಿಕ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಭಾರತದ ಪ್ರಭಾವ ಹೆಚ್ಚಳಕ್ಕೆ ಪ್ರಮುಖ ಕಾರಣಗಳೇನು?
ಆರ್ಥಿಕ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಮಿಶ್ರ ಫಲಿತಾಂಶಗಳಿದ್ದರೂ ಏಷ್ಯಾದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ. ಸ್ಥಿರವಾದ ವ್ಯಾಪಾರ, ಹೂಡಿಕೆ ಸಂಬಂದಗಳು ಹಾಗೂ ಆರ್ಥಿಕ ಸಂಬಂಧಗಳ ಕಾರಣದಿಂದ ಏಷ್ಯಾದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ. ಅದೇ ರೀತಿ ಪ್ರಾದೇಶಿಕ ರಕ್ಷಣಾ ಸಹಕಾರ ಹೆಚ್ಚಳ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳ ರಫ್ತು ಭಾರತದ ರಕ್ಷಣಾ ಜಾಲದ ಬಲ ಹೆಚ್ಚಲು ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.

