ನವದೆಹಲಿ: ಮಾನನಷ್ಟ ಮೊಕದ್ದಮೆಗೆ (Defamation Case) ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ವಿರುದ್ಧ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ (Saket District Court) ಜಾಮೀನು ರಹಿತ ವಾರಂಟ್ (Non Bailable Warrant) ಜಾರಿಗೊಳಿಸಿದೆ.
ʻಬಿಜೆಪಿ ಐಟಿ ಸೆಲ್ ಭಾಗ 2ʼ ಎಂಬ ಹೆಸರಿನ ವೀಡಿಯೊ ಕುರಿತು ವಿಕಾಸ್ ಸಾಂಕೃತ್ಯಾಯನ್ ಅಲಿಯಾಸ್ ವಿಕಾಸ್ ಪಾಂಡೆ ಎಂಬವರು 8 ವರ್ಷಗಳ (2019) ಹಿಂದೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಪದೇ ಪದೇ ಧ್ರುವ್ ರಾಠಿ ಗೈರಾಗಿದ್ದರು. ಇದರಿಂದಾಗಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಇದನ್ನೂ ಓದಿ: ಬಂಧನವಲ್ಲ, ನನ್ನನ್ನು ಕಿಡ್ನ್ಯಾಪ್ ಮಾಡಿದ್ದರು – ಬಿಡುಗಡೆ ಬಳಿಕ ಧ್ರುವ್ ರಾಠಿ ಹೇಳಿದ್ದೇನು?
ಏನಿದು ಪ್ರಕರಣ?
ಧ್ರುವ್ ರಾಠಿ ʻಬಿಜೆಪಿ ಐಟಿ ಸೆಲ್ ಭಾಗ 2ʼ ಎಂಬ ಶೀರ್ಷಿಕೆಯ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ತಮ್ಮ ವಿರುದ್ಧ ಸುಳ್ಳು ಮತ್ತು ಮಾನನಷ್ಟ ಆರೋಪಗಳನ್ನು ಮಾಡಿದ್ದಾರೆ ಎಂದು ದೂರುದಾರ ವಿಕಾಸ್ ಸಾಂಕೃತ್ಯಾಯನ್, ಆರೋಪಿಸಿದ್ದಾರೆ.
ನ್ಯಾಯಾಲಯವು ಈ ಹಿಂದೆ ಅಕ್ಟೋಬರ್ನಲ್ಲಿ ಧ್ರುವ್ ರಾಠಿ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು. ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಅವರ ನಿವಾಸಕ್ಕೆ ಬೀಗ ಹಾಕಲಾಗಿತ್ತು, ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.3ಕ್ಕೆ ನಿಗದಿಪಡಿಸಲಾಗಿದೆ.
2019 ರಿಂದ ಈ ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ. ಅವರು ಭಾರತದಲ್ಲಿ ಇರದೇ ಜರ್ಮನಿಯಲ್ಲಿ ವಾಸವಾಗಿರುವುದರಿಂದ ಪ್ರಕರಣದ ವಿಚಾರಣೆ ವಿಳಂಬವಾಗಿದೆ.
ಫೆ.2024 ರಲ್ಲಿ ಅರವಿಂದ್ ಕೇಜ್ರಿವಾಲ್ ಈ ವೀಡಿಯೊವನ್ನು ಮರುಟ್ವೀಟ್ ಮಾಡಿದ್ದರು. ಇದರ ವಿರುದ್ಧ ಸಹ ವಿಕಾಸ್ ಸಾಂಕೃತ್ಯಾಯನ್ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಈ ಸಮನ್ಸ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ (ಈಗ ನಿವೃತ್ತ) ಮತ್ತು ದೀಪಂಕರ್ ದತ್ತಾ ಅವರ ಪೀಠವು ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.
ಇದಕ್ಕೂ ಮೊದಲು, ದೆಹಲಿ ಹೈಕೋರ್ಟ್ ಸಮನ್ಸ್ ಆದೇಶವನ್ನು ಎತ್ತಿಹಿಡಿದಿತ್ತು. ಮಾನನಷ್ಟಕರ ವಿಷಯವನ್ನು ಮರುಟ್ವೀಟ್ ಮಾಡುವುದರಿಂದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ರ ಅಡಿಯಲ್ಲಿ ಮೊಕದ್ದಮೆ ಹೂಡಬಹುದು ಎಂದು ಹೇಳಿತ್ತು. ಇದನ್ನೂ ಓದಿ: ಮುಂಜಾನೆ ಯೂಟ್ಯೂಬರ್ ಧ್ರುವ್ ರಾಠಿ ಬಿಡುಗಡೆ
