ಶಿವಮೊಗ್ಗ: ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ (Linganamakki Reservoir) ಶರಾವತಿ ಹಿನ್ನೀರು ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ-ಮುಪ್ಪಾನೆ (Halke-Muppane) ಮಾರ್ಗದ ಲಾಂಚ್ ಸೇವೆ ಇಂದಿನಿಂದ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagara) ತಾಲೂಕಿನ ಕರೂರು ಮತ್ತು ಭಾರಂಗಿ ಹೋಬಳಿಯ ಸಂಪರ್ಕದ ಅತಿ ಮುಖ್ಯ ಮಾರ್ಗ ಇದಾಗಿದ್ದು, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಜೂ.2ರಿಂದ ಸ್ಥಗಿತಗೊಳಿಸುತ್ತಿರುವುದಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: 55 ವರ್ಷಗಳ ಓಡಾಟ ಬಂದ್ – ಇನ್ನೂ ಪ್ರವಾಸೋದ್ಯಮಕ್ಕೆ ಲಾಂಚ್ ಬಳಕೆಯಾಗಿಲ್ಲ ಯಾಕೆ?
ಲಿಂಗನಮಕ್ಕಿ ಡ್ಯಾಂನಲ್ಲಿ ಶರಾವತಿ ಹಿನ್ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದ್ದು, ನೀರಿನ ಆಳದಲ್ಲಿರುವ ಮರದ ಕಾಂಡಗಳು ಲಾಂಚ್‌ಗೆ ತಾಗುವ ಅಪಾಯವಿದೆ. ಜೊತೆಗೆ ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ಲಾಂಚ್ ಅಡಿಭಾಗ ನೆಲಕ್ಕೆ ತಾಗುತ್ತಿರುವುದರಿಂದ ಲಾಂಚ್ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ.
ಸಿಗಂದೂರು ಸೇತುವೆ (Siganduru Bridge) ಆದ ಮೇಲೆ ಕರೂರು ಹೋಬಳಿಗೆ ಈ ಮುಪ್ಪಾನೆ ಮಾರ್ಗ ಕೆಲವು ಕಾರಣಗಳಿಂದ ಅತ್ಯಂತ ಮಹತ್ವದ್ದಾಗಿತ್ತು. ಕರೂರು ಹೋಬಳಿಯ ಪೊಲೀಸ್ ಠಾಣೆ ಮತ್ತು ಮೆಸ್ಕಾಂ ಕಚೇರಿಗಳು ಕಾರ್ಗಲ್-ಜೋಗದಲ್ಲಿದ್ದು, ಗ್ಯಾಸ್ ಸಿಲಿಂಡರ್ ಪಡೆಯಲು ಮತ್ತೀತರ ಕಾರಣಕ್ಕೆ ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿಯ ಜನ ಈ ಮಾರ್ಗದಲ್ಲೇ ಸಂಚರಿಸುತ್ತಾರೆ. ಜೊತೆಗೆ ಶಿರಸಿ-ಸಿದ್ದಾಪುರ ಭಾಗದ ಜನರು ಸಿಗಂದೂರಿಗೆ ಬರಲು ಇದೇ ಮಾರ್ಗ ಅತಿಮುಖ್ಯವಾಗಿತ್ತು
ಇದೀಗ ಲಾಂಚ್ ಸಂಚಾರ ತಾತ್ಕಾಲಿಕವಾಗಿ ಕೊನೆಗೊಂಡರೂ, ಮಳೆ ಹೆಚ್ಚಾಗಿ ನೀರಿನ ಮಟ್ಟ ಏರಿದಲ್ಲಿ ಲಾಂಚ್ ಸಂಚಾರ ಪುನಾರಂಭವಾಗಲಿದೆ ಎಂದು ಬಂದರು & ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಬೆಳಗಾವಿಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಜನ ಅರೆಸ್ಟ್
