ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿರುವ ವ್ಯಕ್ತಿಗಳ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲು ದೆಹಲಿ ಪೊಲೀಸರು (Delhi Police) ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಪ್ರತಿಭಟನೆ ವೇಳೆ ಗಲಭೆ ಹಾಗೂ ಹಿಂಸಾಚಾರ ನಡೆಸಿದವರನ್ನು ಗುರುತಿಸಲು ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು (CCTV Footage), ವೀಡಿಯೊ ರೆಕಾರ್ಡಿಂಗ್‌ಗಳು ಹಾಗೂ ಡಿಜಿಟಲ್/ತಾಂತ್ರಿಕ ಸಾಕ್ಷ್ಯಗಳನ್ನು ತೀವ್ರವಾಗಿ ವಿಶ್ಲೇಷಿಸುತ್ತಿದ್ದಾರೆ.
ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಸಾಬೀತಾದ ವ್ಯಕ್ತಿಗಳ ವಿರುದ್ಧ ಕಾನೂನು ನಿಬಂಧನೆಗಳ ಪ್ರಕಾರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೋನಂ ವಾಂಗ್ಚುಕ್ ನಿರಶನ ಅಂತ್ಯ – ತಡರಾತ್ರಿ ಕೇಂದ್ರದಿಂದ ಮನವೊಲಿಕೆ ಸಕ್ಸಸ್
ಈ ಹಿಂದೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಹೊರತಾಗಿಯೂ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಈ ನಿಯಮದಡಿ ಕಠಿಣ ಕ್ರಮ ಜರುಗಿಸಲು ಪೊಲೀಸರು ಯೋಜಿಸಿದ್ದಾರೆ.
ದೆಹಲಿ ಪೊಲೀಸರು ಹೇಳಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೈರಲ್ ಸುದ್ದಿಯು ದಾರಿತಪ್ಪಿಸುವಂತಿದೆ. ಸಿಜೆಪಿ (CJP) ಪ್ರತಿಭಟನಾಕಾರರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ಅಧಿಕೃತ ನಿರ್ಧಾರವನ್ನು ಪ್ರಕಟಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು: ಮಿಡ್‌ನೈಟ್ ಮೋದಿ ಸಂದೇಶ
ಇಂತಹ ಸುಳ್ಳು ಹಾಗೂ ಆಧಾರರಹಿತ ಸುದ್ದಿಗಳನ್ನು ನಂಬಬಾರದು ಅಥವಾ ಅವುಗಳನ್ನು ಬೇರೆಯವರಿಗೆ ಹಂಚಿಕೊಳ್ಳಬಾರದು ಎಂದು ನಾಗರಿಕರಲ್ಲಿ ಮನವಿ ಮಾಡಲಾಗಿದೆ. ದಯವಿಟ್ಟು ಯಾವುದೇ ಸುದ್ದಿಯ ಸತ್ಯಾಸತ್ಯತೆಗಾಗಿ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ಅವಲಂಬಿಸಿ ಎಂದು ಮನವಿ ಮಾಡಿದ್ದಾರೆ.
