ಚಿಕ್ಕಮಗಳೂರು: ಜನರ ಭಕ್ತಿಪೂರ್ವಕ ಆಚರಣೆಗಳೇ ವಿಶೇಷ, ಅವೆಲ್ಲ ಪ್ರಶ್ನಾತೀತವಾದದ್ದೂ. ಅಲ್ಲಿ ಭಕ್ತಿ, ನಂಬಿಕೆ ಮಾತ್ರ ಸತ್ಯ. ಅದಕ್ಕೆ ಉದಾಹರಣೆ ಎಂಬಂತೆ ದೇವರನ್ನೇ ಸರಪಳಿಯಲ್ಲಿ ಬಂಧಿಸಿದ ಮಲೆನಾಡಿಗರ ವಿಶೇಷ ಕತೆ ಇದು.
ಹೌದು, ಕಡೂರು (Kadur) ತಾಲೂಕಿನ ಸಖರಾಯಪಟ್ಟಣದಲ್ಲಿ 2036 ಎಕರೆ ವಿಸ್ತೀರ್ಣದ ಬೃಹತ್ ಕೆರೆ ನೀರನ್ನು ಒಂದೇ ರಾತ್ರಿಗೆ ಮೂರೇ ಬೊಗಸೆಗೆ ಕುಡಿದು ಖಾಲಿ ಮಾಡುತ್ತಾನೆ ಎಂದು ಕೆಂಚರಾಯ ಸ್ವಾಮಿಯನ್ನೇ (Kencharayaswamy) ಜನ ಕಬ್ಬಿಣದ ಸರಪಳಿಗಳಿಂದ ಬಂಧಿಸಿದ್ದಾರೆ. ಈ ನಂಬಿಕೆಗೆ 500 ವರ್ಷಗಳ ಇತಿಹಾಸವಿದೆ. ರಾತ್ರಿ ತುಂಬಿದ್ದ ಕೆರೆ ಕೆಂಚರಾಯನ ಒಡಲಿಗೆ ಹೊತ್ತಿಗೂ ಸಾಲಲ್ಲ. ಅದಕ್ಕಾಗಿ 500 ವರ್ಷಗಳಿಂದ ಇಂದಿಗೂ ದೇವರನ್ನು ಒಂದು ದಿನಕ್ಕೂ ಬಂಧ ಮುಕ್ತವಾಗಿಸಿಲ್ಲ! ಇದನ್ನೂ ಓದಿ: ಅಯ್ಯನಕೆರೆ, ಮದಗದ ಕೆರೆಯಲ್ಲಿ ನೀರಿಲ್ಲದೇ ಕಂಗಾಲು – ಮಳೆಗಾಗಿ ದೇವರ ಮೊರೆ ಹೋದ ಜನ

ಮಾತು ತಪ್ಪಿದ ಶಕುನ ರಂಗನಾಥ ಸ್ವಾಮಿ!
ಅಡಿಕೆ ಮರದ ಉದ್ದದ ಮುದ್ದೆ. ತೆಂಗಿನ ಮರದ ಉದ್ದದ ಅನ್ನ. ತಾಳೆ ಮರದ ಉದ್ದದ ಮಾಂಸ. ಬಾಳೆ ಮರದ ಉದ್ದ ಹೆಂಡ ಕೊಡುತ್ತೇನೆ ಎಂದು ಕೆಂಚರಾಯ ಸ್ವಾಮಿಗೆ ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿ ಹೇಳಿರುತ್ತಾನೆ. ಆದರೆ ಮಾತಿಗೆ ತಪ್ಪಿದ ಎಂದು 2036 ಎಕರೆ ಕೆರೆ ನೀರನ್ನ ಮೂರೇ ಬೊಗಸೆಗೆ ಕೆಂಚರಾಯ ಕುಡಿದು ಖಾಲಿ ಮಾಡಿದ್ದ. ಇದೇ ಕಾರಣಕ್ಕೆ ಕಳೆದ 500 ವರ್ಷಗಳಿಂದ ಕಬ್ಬಿಣದ ಸರಪಳಿಗಳಿಂದ ಬಂಧಿಸಿದ್ದಾರೆ.
ಈ ಕೆಂಚರಾಯನಿಗೆ ಏಳುಗುಡ್ಡಗಳನ್ನ ಆವರಿಸಿಕೊಂಡಿರೋ 2036 ಎಕರೆ ಪ್ರದೇಶದ ಅಯ್ಯನಕೆರೆ ನೀರು ಒಂದು ಹೊತ್ತಿಗೂ ಸಾಲೋದಿಲ್ಲ. ಮೂರೇ ಬೊಗಸೆಗೆ ಇಡೀ ಕೆರೆ ನೀರು ಖಾಲಿ ಮಾಡುತ್ತಾನೆ ಎಂಬ ನಂಬಿಕೆ ಜನರದ್ದು. ಅದಕ್ಕಾಗಿ ಇಲ್ಲಿನ ಜನ ದೇವರನ್ನೇ ಕಬ್ಬಿಣದ ಸರಪಳಿಗಳಿಂದ ಬಂಧಿಸಿ ಪೂಜೆ ಮಾಡ್ತಿದ್ದಾರೆ.
ದೇವಾಲಯದ ಪಕ್ಕದಲ್ಲೇ ಇರೋ ಈ ಅಯ್ಯನಕೆರೆ ನೀರು ಊರೊಳಗಿನ ರಂಗನಾಥಸ್ವಾಮಿಗೆ ಸ್ನಾನದ ಜೊತೆ ರೈತರ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾಗಿತ್ತು. ಆದರೆ, ಹಸಿವನ್ನು ತಾಳಲಾರದ ಕೆಂಚರಾಯ ಒಂದೇ ಹೊತ್ತಿಗೆ ನೀರನ್ನ ಖಾಲಿ ಮಾಡುತ್ತಿದ್ದನಂತೆ. ಅದಕ್ಕಾಗಿ ಇಲ್ಲಿನ ಜನ ಕಳೆದ ದೇವರನ್ನ ಬಂಧಿಸಿದ್ದಾರೆ. ಒಂದು ವೇಳೆ, ದೇವರನ್ನ ಬಂಧನದಿಂದ ಮುಕ್ತ ಮಾಡಿದರೆ ಅಯ್ಯನಕೆರೆ ನೀರು ಒಂದೇ ದಿನದಲ್ಲಿ ಖಾಲಿಯಾಗತ್ತೆ ಅನ್ನೋದು ಸ್ಥಳಿಯರ ನಂಬಿಕೆ.

ಸಖರಾಯಪಟ್ಟಣಕ್ಕೆ ಬಂದ ಭಕ್ತರೆಲ್ಲ ರಂಗನಾಥ ಸ್ವಾಮಿಗೆ ಹಣ್ಣು-ಕಾಯಿ ಎಡೆಮಾಡಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಕೆಂಚರಾಯನಿಗೆ ಪೂಜೆಯೂ ಇಲ್ಲ. ಎಡೆಯೂ ಇರುತ್ತಿರಲಿಲ್ಲ. ಅದಕ್ಕಾಗಿ ಕೆಂಚರಾಯ ಹಸಿವು-ಹಸಿವು ಅಂತಾ ಏಳು ಗುಡ್ಡದ ನೀರನ್ನೆಲ್ಲಾ ರಾತ್ರೋರಾತ್ರಿ ಕುಡಿದು ಖಾಲಿ ಮಾಡ್ತಿದ್ದನಂತೆ. ದಿನಕ್ಕೆ ಮೂರು ಬಾರಿ ಸ್ನಾನ ಮಾಡ್ತಿದ್ದ ರಂಗನಾಥ ಸ್ವಾಮಿ ಪೂಜೆಗೂ ನೀರು ಇರುತ್ತಿರಲಿಲ್ಲ. ಅದಕ್ಕಾಗಿ, ಊರನ್ನೇ ಕಾಯೋ ದೇವರೇ ಇಲ್ಲಿ ಬಂಧಿಯಾಗಿದ್ದಾನೆ.
ಈಗ ದಿನಂ ಪ್ರತಿ ರಂಗನಾಥನನ್ನ ನೋಡಲು ಬರೋ ಭಕ್ತರು ಕೆಂಚರಾಯನಿಗೆ ಕುರಿ, ಕೋಳಿಯನ್ನ ಬಲಿಕೊಟ್ಟು ದೇವರ ಹೊಟ್ಟೆ ತುಂಬಿಸ್ತಿದ್ದಾರೆ. ದೇವರ ಮೈಮೇಲಿನ ಕಬ್ಬಿಣದ ಸರಪಳಿಯನ್ನ ಕಳೆದ ಐನೂರು ವರ್ಷಗಳಿಂದ ತೆಗಿದಿಲ್ವಂತೆ. ಈ ಕೆಂಚರಾಯ ಬರೀ ಊಟಕ್ಕೆ ಮಾತ್ರ ಫೇಮಸ್ ಅಲ್ಲ. ಮಕ್ಕಳಾಗದವರು ರಂಗನಾಥ ಸ್ವಾಮಿ ಗುಡ್ಡಕ್ಕೆ ಹೋಗಿ ಗಂಗಮ್ಮನ ಮಾಡಿ ಬಂದ್ರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆಯೂ ಸ್ಥಳೀಯರಲ್ಲಿ ಬಲವಾಗಿದೆ.
ಇಲ್ಲಿನ ಜನ ಒಂದೇ ಒಂದು ಘಳಿಗೆಗೂ ಕೂಡ ದೇವರನ್ನು ಬಂಧಮುಕ್ತ ಮಾಡೋಕೆ ಯೋಚಿಸಿಲ್ಲ. ಆದ್ರೆ, ಸೃಷ್ಟಿಕರ್ತ ಕೂಡ ನರಮನುಷ್ಯರು ನನ್ನನ್ನೇ ಕಟ್ಟಿಹಾಕುವಷ್ಟು ದೊಡ್ಡವರಾಗಿದ್ದಾರಾ ಎಂದೂ ಕೋಪಗೊಂಡಿಲ್ಲ. ಯಾಕಂದ್ರೆ, ಬಂದ ಭಕ್ತರ ಕಷ್ಟವನ್ನೆಲ್ಲಾ ದೂರ ಮಾಡಿ ಬೇಡಿಕೆಗಳನ್ನೆಲ್ಲಾ ಈಡೇರಿಸುತ್ತಾ ಭಕ್ತರಿಂದ ತನ್ನ ಸೇವೆಯನ್ನು ಪಡೆದು ಭಕ್ತರ ನೆಚ್ಚಿನ ದೈವನಾಗಿದ್ದಾನೆ ಈ ಕೆಂಚರಾಯ. ಇದನ್ನೂ ಓದಿ: ಡಿಕೆಶಿಗೆ ಧರ್ಮ, ಸಂಸ್ಕೃತಿ ಬಗ್ಗೆ ಅರಿವಿದೆ – ಮಠದ ಅಭಿವೃದ್ಧಿಗೆ ಸಿಎಂ ಬಳಿ ಅನುದಾನ ಕೇಳಿದ ರಂಭಾಪುರಿ ಶ್ರೀ
