ಉಡುಪಿ: ಕೃಷ್ಣ ನಾಡು ಉಡುಪಿ (Udupi) ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅರ್ಘ್ಯ ಪ್ರದಾನ, ಸೆಪ್ಟೆಂಬರ್ 5ರಂದು ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವ ನಡೆಯಲಿದೆ. ಅಷ್ಟಮಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಕೃಷ್ಣ ಮಠದ ಸುತ್ತಮುತ್ತ ಹಾಗೂ ರಥಬೀದಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ನಡುವೆ ಕರಾವಳಿಯ ಸಾಂಪ್ರದಾಯಿಕ ಹುಲಿವೇಷ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಭಕ್ತರನ್ನು ಸೆಳೆಯಲು ಸಜ್ಜಾಗಿವೆ.
ನಾಳೆ ರಾತ್ರಿ 12:12ಕ್ಕೆ ಶ್ರೀಕೃಷ್ಣನಿಗೆ (Krishna Mutt) ಅರ್ಘ್ಯ ಪ್ರದಾನ ನಡೆಯಲಿದ್ದು, ಸೆಪ್ಟೆಂಬರ್ 5ರಂದು ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವದ ವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಕೃಷ್ಣ ಭಕ್ತರು ಉಡುಪಿಗೆ ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಸ್ವಾಗತಕ್ಕೆ ನಗರವೂ ಸಿಂಗಾರಗೊಳ್ಳುತ್ತಿದೆ. ಅಷ್ಟಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡೋದು ಕರಾವಳಿಯ ಸಾಂಪ್ರದಾಯಿಕ ಹುಲಿವೇಷ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಗೆ ಮನೆಯಲ್ಲೇ ಮಾಡಿ ರುಚಿಕರ ಪನೀರ್ ಖೀರ್
ಕೃಷ್ಣ ರಥಬೀದಿಯಲ್ಲಿ ಹುಲಿಗಳ ಘರ್ಜನೆ, ಹೆಜ್ಜೆ ಹಾಗೂ ಕುಣಿತ ಕಂಗೊಳಿಸಲಿದೆ. ನೂರಾರು ಹುಲಿವೇಷ ತಂಡಗಳು ಈಗಾಗಲೇ ತಾಲೀಮು ಆರಂಭಿಸಿವೆ. ಹುಲಿವೇಷ ಸೇವೆಗೆ ಹೆಸರುವಾಸಿಯಾಗಿರುವ ತಂಡಗಲಕು ಅಷ್ಟಮಿಗಾಗಿ ಸಜ್ಜಾಗಿದ್ದು, ತಂಡದ ವತಿಯಿಂದ 11 ಹುಲಿವೇಷ ಸೇವೆಗಳನ್ನು ನಡೆಸಲು ಸಿದ್ಧತೆ ನಡೆದಿದೆ. ಹುಲಿವೇಷದ ಜೊತೆಗೆ ಕರಾವಳಿಯ ವಿವಿಧ ಸಾಂಪ್ರದಾಯಿಕ ವೇಷಗಳು, ಜನಪದ ಕಲಾ ಪ್ರದರ್ಶನಗಳು ಅಷ್ಟಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ಅಷ್ಟಮಿ ಪ್ರಯುಕ್ತ ಹುಲಿವೇಷ ಸ್ಪರ್ಧೆ, ಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ಸೆಳೆಯುವಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಎರಡು ದಿನಗಳ ಕಾಲ ವಿಶೇಷ ವೇದಿಕೆಯಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಸೆ.5 ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ. ವಿಟ್ಲಪಿಂಡಿ–ಶ್ರೀಕೃಷ್ಣಲೀಲೋತ್ಸವದ ಅಂಗವಾಗಿ ರಥಬೀದಿಯ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನವೂ ನಡೆಯಲಿದೆ. ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿರುವ ಈ ಮಲ್ಲಯುದ್ಧ ಪ್ರದರ್ಶನಕ್ಕೆ ಭಕ್ತರು ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ: Photo Gallery| ಬೆಂಗಳೂರು ಇಸ್ಕಾನ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ – ಕಣ್ತುಂಬಿಕೊಂಡ ಸಾವಿರಾರು ಭಕ್ತರು
ವಿಶೇಷ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದ ಕಲಾ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ. ಸೆ.6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಅಷ್ಟಮಂಗಲ ಪ್ರಶ್ನೆಯ ಅನುಸಾರದಂತೆ ಕೋಟಿ ತುಳಸಿ ಅರ್ಚನೆಯನ್ನೂ ಕೈಗೊಳ್ಳಲಾಗಿದೆ.
