– ಗಡಿ ಜಿಲ್ಲೆಗಳಿಂದ ಗಲ್ಲಿಗಲ್ಲಿಯವರೆಗೆ ಸಂಘದ ಅಬ್ಬರ
– 530 ರಿಂದ 4,325 ಶಾಖೆಗಳಿಗೆ ಏರಿಕೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ಬದಲಾವಣೆಯ ಹಿಂದೆ ಕೇವಲ ರಾಜಕೀಯ ರಣತಂತ್ರಗಳಷ್ಟೇ ಅಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವ್ಯವಸ್ಥಿತ “ಗ್ರೌಂಡ್ ವರ್ಕ್” ಪ್ರಮುಖ ಪಾತ್ರ ವಹಿಸಿದೆ. ಕಳೆದ ಒಂದು ವರ್ಷದಿಂದ ಸಂಘವು ನಡೆಸಿದ ‘ಮೈಕ್ರೋ ಲೆವೆಲ್’ ಕಾರ್ಯಾಚರಣೆ ಈಗ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ದಾರಿಯಾಗಿದೆ.
ರಾಜ್ಯದ 294 ಕ್ಷೇತ್ರಗಳ ಪೈಕಿ 250 ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್ ಅಕ್ಷರಶಃ ಮತದಾರರ ಜಾಗೃತಿ ಅಭಿಯಾನದ ಸುನಾಮಿಯನ್ನೇ ಎಬ್ಬಿಸಿತ್ತು. ಕಳೆದ ಒಂದು ವರ್ಷದಿಂದ ಪ್ರತಿ ಕ್ಷೇತ್ರದಲ್ಲೂ ಸರಾಸರಿ 700ರಂತೆ, ಒಟ್ಟು 1.75 ಲಕ್ಷಕ್ಕೂ ಹೆಚ್ಚು ಲೋಕಮತ್ ಪರಿಷ್ಕಾರ ಸಭೆಯನ್ನು ಆಯೋಜಿಸಲಾಗಿತ್ತು.
ಬಂಗ್ಲಾದೇಶಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಈ ಚುನಾವಣೆಯನ್ನು ‘ಬಂಗಾಳಿ ಹಿಂದೂಗಳ ಅಳಿವು-ಉಳಿವಿನ ಪ್ರಶ್ನೆ’ ಎಂದು ಬಿಂಬಿಸುವಲ್ಲಿ ಸಂಘ ಯಶಸ್ವಿಯಾಯಿತು. ಈ ಮೂಲಕ ಚದುರಿ ಹೋಗುತ್ತಿದ್ದ ಹಿಂದೂ ಮತಗಳನ್ನು ಒಂದೇ ಕಡೆ ತರುವಲ್ಲಿ ಈ ಸಭೆಗಳು ಯಶಸ್ವಿಯಾದವು.
ಆರ್‌ಎಸ್‌ಎಸ್‌ಗೆ ಪೂರಕವಾಗಿ ಅದರ 14 ಅಂಗಸಂಘಟನೆಗಳು ತಳಮಟ್ಟದಲ್ಲಿ ಕೆಲಸ ಮಾಡಿವೆ. ಎಬಿವಿಪಿ, ಬಿಎಂಎಸ್, ಭಾರತೀಯ ಕಿಸಾನ್ ಸಂಘ ಮತ್ತು ಲಘು ಉದ್ಯೋಗ ಭಾರತಿ ಸಂಘಟನೆಗಳು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರನ್ನು ತಲುಪಿದವು. ಇದನ್ನೂ ಓದಿ: ದೇವರ ನಾಡಿನಲ್ಲಿ ಅರಳಿದ ಕಮಲ – 3 ಗೆಲುವಿನೊಂದಿಗೆ ಇತಿಹಾಸ ಸೃಷ್ಟಿ

ಬಾಂಗ್ಲಾ ಗಡಿಯಲ್ಲಿರುವ (Bangladesh Border) ಜಿಲ್ಲೆಗಳಲ್ಲಿ ಈ ಸಂಘಟನೆಯು ನುಸುಳುಕೋರರ ಸಮಸ್ಯೆ ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಜನರಲ್ಲಿ ಸೀಮಾಂತ ಚೇತನ ಮಂಚ್ ಜಾಗೃತಿ ಮೂಡಿಸಿತು.
ಕಾರ್ಯಾಚರಣೆಯ ಅನುಕೂಲಕ್ಕಾಗಿ ಸಂಘವು ಬಂಗಾಳವನ್ನು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಿತ್ತು. ಉತ್ತರ ಬಂಗಾ 1,217 ಶಾಖೆ, ಮಧ್ಯ ಬಂಗಾ 1,881 ಶಾಖೆ, ದಕ್ಷಿಣ ಬಂಗಾ 1,317 ಶಾಖೆಗಳ ಮೂಲಕ ಸಕ್ರೀಯ ಕಾರ್ಯಾಚರಣೆ ನಡೆಸಿತ್ತು,15 ವರ್ಷಗಳ ಹಿಂದೆ ರಾಜ್ಯದಲ್ಲಿ ಕೇವಲ 530 ಶಾಖೆಗಳಿದ್ದವು, ಆದರೆ ಇಂದು ಅವುಗಳ ಸಂಖ್ಯೆ 4,325ಕ್ಕೆ ಏರಿಕೆಯಾಗಿರುವುದು ಸಂಘದ ಬೆಳವಣಿಗೆಗೆ ಸಾಕ್ಷಿ.
2021ರ ಸೋಲಿನಿಂದ ಪಾಠ ಕಲಿತಿದ್ದ ಆರ್‌ಎಸ್‌ಎಸ್ ಈ ಬಾರಿ ಸಾಂಸ್ಕೃತಿಕವಾಗಿಯೂ ಟಿಎಂಸಿಗೆ ಬಲವಾದ ಪೆಟ್ಟು ನೀಡಿತು. ರಾಜ್ಯಾದ್ಯಂತ 29,000ಕ್ಕೂ ಹೆಚ್ಚು ರಾಮನವಮಿ ಶೋಭಾಯಾತ್ರೆಗಳನ್ನು ಆಯೋಜಿಸುವ ಮೂಲಕ ಕೇಸರಿ ಅಲೆ ಸೃಷ್ಟಿಸಲಾಯಿತು. ಉತ್ತರ ಬಂಗಾಳದಲ್ಲಿ 10,000, ಮಧ್ಯದಲ್ಲಿ 7,000 ಹಾಗೂ ದಕ್ಷಿಣ ಬಂಗಾಳದಲ್ಲಿ 12,000 ಶೋಭಾಯಾತ್ರೆಗಳು ಜನಮಾನಸದಲ್ಲಿ ‘ಜೈ ಶ್ರೀರಾಮ್’ ಮಂತ್ರ ಮೊಳಗುವಂತೆ ಮಾಡಿದವು. ಇದನ್ನೂ ಓದಿ: ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!
ಮೊಕ್ಕಾಂ ಹೂಡಿದ್ದ ಭಾಗವತ್
ಬಂಗಾಳದ ಮೇಲೆ ವಿಶೇಷ ಗಮನ ಹರಿಸಿದ್ದ ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್ (Mohan Bhagwat) ಅವರು 2025ರ ಅವಧಿಯಲ್ಲಿ ಒಟ್ಟು 14 ದಿನಗಳ ಕಾಲ ರಾಜ್ಯದಲ್ಲೇ ಮೊಕ್ಕಾಂ ಹೂಡಿದ್ದರು. ವರ್ಷಾಂತ್ಯದಲ್ಲಿ 4 ದಿನಗಳ ಭೇಟಿ ಮೂಲಕ ಚುನಾವಣಾ ಸಿದ್ಧತೆಗಳ ಅವಲೋಕನ ಮಾಡಿದ್ದರು. ಈ ಅವಧಿಯಲ್ಲಿ ಆರ್‌ಎಸ್‌ಎಸ್ ಮಾತ್ರವಲ್ಲದೆ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರ ಜೊತೆಗೂ ಸಮಾಲೋಚನೆ ನಡೆಸಿ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದರು.

ಪ್ರತಿಯೊಬ್ಬರಿಗೂ ಸಾಂಸ್ಕೃತಿಕ ಅಸ್ಮಿತೆಯ ಅರಿವು ಮೂಡಿಸುವುದು. ಜಾತಿ ಭೇದ ಮರೆತು ಹಿಂದೂ ಸಮಾಜವನ್ನು ಸಂಘಟಿಸುವುದು. ಸಾಮಾಜಿಕ ಸಮರಸ್ಯಕ್ಕಾಗಿ ದಲಿತ ಸಮುದಾಯದವರನ್ನು ಜೊತೆಗೂಡಿಸಿಕೊಳ್ಳುವುದು.ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸುವುದು. ಬಾಂಗ್ಲಾ ಗಡಿಯ ಮೂಲಕ ನಡೆಯುವ ಅಕ್ರಮ ನುಸುಳುವಿಕೆಯಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದರು.
ಬಹಳ ಮುಖ್ಯವಾಗಿ ದಲಿತ ಮತದಾರರನ್ನು ತಲುಪಲು ಭಾಗವತ್ ಅವರು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೇವಲ ಭೇಟಿ ನೀಡುವುದಲ್ಲ, ದಲಿತರ ಮನೆಯಲ್ಲಿ ಸಹಭೋಜನ ಮಾಡಬೇಕು ಮತ್ತು ಸಾಧ್ಯವಾದರೆ ಒಂದು ರಾತ್ರಿ ಅವರ ಮನೆಯಲ್ಲೇ ಕಳೆಯಬೇಕು. ದಲಿತ ಕುಟುಂಬದವರು ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ಕರೆದೊಯ್ಯುವುದು ಹಾಗೂ ಅವರ ಮನೆಯ ಮದುವೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಸಹಾಯ ಮಾಡುವಂತೆ ಕಿವಿಮಾತು ಹೇಳಿದ್ದರು. ಈ “ಸಮಾಜ ಸೇವಾ ಮಂತ್ರ”ವು ಬಿಜೆಪಿ ಮೇಲೆ ಜನರಿಟ್ಟಿದ್ದ ನಂಬಿಕೆಯನ್ನು ಹೆಚ್ಚಿಸಿತು.
ಮಮತಾ ಬ್ಯಾನರ್ಜಿ ಅವರ ಕೋಟೆಯನ್ನು ಭೇದಿಸಲು ಬಿಜೆಪಿ ಮುಂಚೂಣಿಯಲ್ಲಿದ್ದರೆ, ಅದರ ಹಿಂದೆ ಅಡಿಪಾಯವಾಗಿ ಕೆಲಸ ಮಾಡಿದ್ದು ಆರ್‌ಎಸ್‌ಎಸ್. ನುಸುಳುಕೋರರ ಸಮಸ್ಯೆ, ಹಿಂದೂ ಅಸ್ಮಿತೆ ಮತ್ತು ವ್ಯವಸ್ಥಿತ ಶಾಖೆಗಳ ಜಾಲವು ಬಂಗಾಳದ ರಾಜಕೀಯ ಚಿತ್ರಣವನ್ನೇ ಈಗ ಬದಲಿಸಿದೆ.












