ಬೆಂಗಳೂರು: ಜು.10ರಿಂದ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟಿರುವ ಅನಾಥ ವಾಹನಗಳ ತೆರವು ಹಾಗೂ ಹರಾಜು ಕಾರ್ಯ ಆರಂಭಿಸಲು ಜಿಬಿಎ (GBA) ಸಜ್ಜಾಗಿದೆ.
ರಸ್ತೆಗಳು, ತೆರೆದ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಅನಾಥವಾಗಿ ಬಿಡಲಾದ ವಾಹನಗಳನ್ನು 5 ನಗರ ಪಾಲಿಕೆಗಳಲ್ಲಿ ಗುರುತಿಸಿ ಸಂಚಾರಿ ಪೊಲೀಸರು ಹಾಗೂ ಜಿಬಿಎ ಜಂಟಿಯಾಗಿ ತೆರವು ಕಾರ್ಯ ನಡೆಸಲಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಯಶಸ್ವಿ ಹೆರಿಗೆ – ತಾಯಿ, ಮಗುವಿನ ಪ್ರಾಣ ಉಳಿಸಿದ ಮೂವರು ಆಯುರ್ವೇದ ವೈದ್ಯೆಯರು
ಮೊದಲು ಗುರುತಿಸಲಾದ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ, ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅಂಟಿಸಲಾಗುವುದು. ನೋಟಿಸ್ ಅಂಟಿಸಿದ ವಾಹನಗಳ ಚಕ್ರಕ್ಕೆ ವೀಲ್ ಕ್ಲಾಂಪ್ ಅಳವಡಿಸಲಾಗುವುದು. ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಎಳೆದುಕೊಂಡು ಹೋಗಿ ಜಪ್ತಿ ಮಾಡಲಾಗುವುದು. ಜಪ್ತಿ ಮಾಡಲಾದ ಎಲ್ಲಾ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುವುದು ಎಂದು ತಿಳಿಸಿದೆ.
