ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಶಿವಾಜಿ ಕುರಿತಾದ ಸಿನಿಮಾ ಒಪ್ಪಿಕೊಂಡಾಗ ಕೆಲವರು ವಿರೋಧಿಸಿದರು. ಒಂದಷ್ಟು ಕನ್ನಡ ಪರ ಸಂಘಟನೆಗಳು ಕೂಡ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದರು. ಶಿವಾಜಿ ಕನ್ನಡಿಗರ ವಿರೋಧಿ. ಹಾಗಾಗಿ ಈ ಚಿತ್ರದಲ್ಲಿ ರಿಷಬ್ ನಟಿಸಬಾರದು ಅನ್ನೋದು ಕೆಲವರ ಅಭಿಪ್ರಾಯ ಆಗಿತ್ತು. ಆನಂತರ ಈ ವಿವಾದ ತಣ್ಣಗಾಯಿತು.


ಈ ವಿವಾದದ ನಂತರ ಶಿವಾಜಿ ಸಿನಿಮಾ ಕುರಿತಾಗಿ ರಿಷಬ್ ಶೆಟ್ಟಿ ಎಲ್ಲಿಯೂ ಮಾತಾಡಿರಲಿಲ್ಲ. ಹಾಗಾಗಿ ಶಿವಾಜಿ (Chhatrapati Shivaji Maharaj) ಸಿನಿಮಾವನ್ನು ರಿಷಬ್ ಕೈ ಬಿಟ್ಟಿದ್ದಾರೆ ಅನ್ನುವ ಮಾತು ಕೇಳಿ ಬಂತು. ಇದೀಗ ಮತ್ತೆ ರಿಷಬ್ ಶೆಟ್ಟಿ ಅವರು ಶಿವಾಜಿ ಸಿನಿಮಾ ಕುರಿತಾಗಿ ಮಾತಾಡಿದ್ದಾರೆ. `ಜೈ ಹನುಮಾನ್ʼ (Jai Hanuman) ಸಿನಿಮಾದ ನಂತರ ಶಿವಾಜಿ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಸದ್ಯ ಜೈ ಹನುಮಾನ್ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಶಿವಾಜಿ ಚಿತ್ರೀಕರಣ ಶುರುವಾಗಲಿದೆ. ಆ ಸಿನಿಮಾದಲ್ಲಿ ನಟಿಸುವ ಕುರಿತು ಸ್ವತಃ ರಿಷಬ್ ಮಾತಾಡಿದ್ದಾರೆ. ಸದ್ಯ ಕೈಯಲ್ಲಿ ʻಜೈ ಹನುಮಾನ್ʼ ಮತ್ತು ʻಶಿವಾಜಿʼ ಚಿತ್ರಗಳಿವೆ. ನಂತರ ಸಿನಿಮಾವೊಂದನ್ನ ನಿರ್ದೇಶನ ಮಾಡಲಿದ್ದೇನೆ. ಅದು ಮುಗಿದಾದ ನಂತರ ಕಾಂತಾರ ಚಾಪ್ಟರ್-2 ಚಿತ್ರದಲ್ಲಿ ತೊಡಗಿಕೊಳ್ಳುವ ಕುರಿತು ರಿಷಬ್ ಮಾತಾಡಿದ್ದಾರೆ. ಅಲ್ಲಿಗೆ ಶಿವಾಜಿ ಸಿನಿಮಾ ಕೈ ಬಿಟ್ಟಿಲ್ಲ ಅನ್ನೋದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.

