ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯ ಅಬ್ಬರ ಇದೀಗ ಕೊಂಚ ಮಟ್ಟಿಗೆ ತಗ್ಗಿದ್ದು, ಕಳೆದ ಕೆಲವು ದಿನಗಳ ಭಾರೀ ಮಳೆಯ ಪರಿಣಾಮ ತುಂಬಿ ಹರಿಯುತ್ತಿರುವ ಅಬ್ಬೆ ಜಲಪಾತ ಹೊಸ ಚೈತನ್ಯದಿಂದ ಕಂಗೊಳಿಸುತ್ತಿದೆ.
ಮಳೆ ಪ್ರಮಾಣ ಇಳಿಮುಖವಾಗಿರುವುದರಿಂದ ಜನಜೀವನವೂ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅದರಲ್ಲೂ ಮಡಿಕೇರಿ ಸಮೀಪದ ಪ್ರಕೃತಿ ಸೌಂದರ್ಯದ ತಾಣವಾದ ಅಬ್ಬಿ ಜಲಪಾತ ಇದೀಗ ತನ್ನ ಸಂಪೂರ್ಣ ವೈಭವದೊಂದಿಗೆ ಕಣ್ಮನ ಸೆಳೆಯುತ್ತಿದೆ. ಮಳೆಯ ನೀರಿನಿಂದ ತುಂಬಿ ತುಳುಕುತ್ತಿರುವ ಜಲಪಾತ ಹಾಲಿನ ನೊರೆಯಂತೆ ಎತ್ತರದಿಂದ ಧುಮ್ಮಿಕ್ಕುತ್ತಿದ್ದು, ಮನಮೋಹಕ ದೃಶ್ಯವನ್ನು ಸೃಷ್ಟಿಸಿದೆ. ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ ಪ್ರವಾಸಿಗರ ಸಂಚಾರವೂ ಹೆಚ್ಚಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿರುವ ಪ್ರವಾಸಿಗರು ಅಬ್ಬಿ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜಲಪಾತದ ಬಳಿ ನಿಂತು ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ, ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ತಮ್ಮ ಪ್ರವಾಸದ ನೆನಪುಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಪೆಲೆಟ್ ಗನ್ ದಾಳಿ ಆರೋಪ; ಅಮಿತ್ ಶಾ ಕ್ಷಮೆಯಾಚನೆಗೆ ರಾಹುಲ್ ಪಟ್ಟು
ಭಾರೀ ಮಳೆಯ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೆ, ಇದೀಗ ಹವಾಮಾನ ಕೊಂಚ ಸುಧಾರಿಸಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ತಂಪಾದ ವಾತಾವರಣ, ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ-ಗುಡ್ಡಗಳು ಹಾಗೂ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಅಬ್ಬಿ ಜಲಪಾತ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ಜಲಪಾತದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವೂ ಮತ್ತಷ್ಟು ಕಳೆಗಟ್ಟಿದ್ದು, ಹಸಿರು ಹೊದಿಕೆ ಹೊದ್ದ ಕಾಫಿ ತೋಟಗಳು, ಮಂಜಿನ ವಾತಾವರಣ ಮತ್ತು ಜಲಪಾತದ ಘರ್ಜನೆ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತಿದೆ. ಮಳೆಯ ನಂತರದ ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಅಬ್ಬಿ ಜಲಪಾತಕ್ಕೆ ಭೇಟಿ ನೀಡುತ್ತಿದ್ದಾರೆ.ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್‌ನ 6 ನೂತನ ಹೆಚ್ಚುವರಿ ನ್ಯಾಯಾಧೀಶರಿಂದ ಪ್ರಮಾಣ ವಚನ ಸ್ವೀಕಾರ



