– ಪ್ರಿಂಟ್‌ಗೂ ಮುನ್ನ ಮನೆಯಲ್ಲೇ ಪ್ರಶ್ನೆಪತ್ರಿಕೆ ಪರಿಶೀಲನೆ
– 80 ಲಕ್ಷದಿಂದ 40 ಲಕ್ಷದವರೆಗೆ ‘ರೇಟ್ ಕಾರ್ಡ್’ – ಇನ್ನೂ 7 ಅಭ್ಯರ್ಥಿಗಳ ತಪ್ಪೊಪ್ಪಿಗೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ CID ಮುಂದೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ನೀಡಿರುವ ಹೇಳಿಕೆಗಳು ಇದೀಗ ಮಹತ್ವ ಪಡೆದುಕೊಂಡಿವೆ.
ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಗ್ಯಾನೇಂದ್ರ ಹಲವು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಪ್ರಿಂಟ್‌ಗೂ ಮುನ್ನವೇ ಪ್ರಶ್ನೆಪತ್ರಿಕೆ ಪರಿಶೀಲನೆ
CID ವಿಚಾರಣೆ ವೇಳೆ, 6 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಿದ್ದೆ ಎಂದು ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ. ಪ್ರಶ್ನೆಪತ್ರಿಕೆಗಳು ಪ್ರಿಂಟ್ ಆಗುವ ಮುನ್ನವೇ ಅವುಗಳನ್ನ ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದೆ. ಈ ಮೂಲಕ ಕರ್ತವ್ಯ ಲೋಪವಾಗಿದೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ. ಆದರೆ ಇದೇ ವಿಚಾರದಲ್ಲಿ ಗ್ಯಾನೇಂದ್ರ ನೀಡಿರುವ ಮತ್ತೊಂದು ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಬಸವರಾಜ್‌ಗೆ ಗೊತ್ತಿಲ್ಲದಂತೆ ಪ್ರಶ್ನೆಪತ್ರಿಕೆ ಬರೆದುಕೊಂಡು ಹೋಗಿದ್ದಾನೆ
ಪ್ರಶ್ನೆಪತ್ರಿಕೆ ಪರಿಶೀಲನೆಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಬಸವರಾಜ್ ಪದೇಪದೇ ಮನೆಗೆ ಬರುತ್ತಿದ್ದ. ತಮಗೆ ಅರಿವಿಲ್ಲದಂತೆ ಬಸವರಾಜ್ ಪ್ರಶ್ನೆಪತ್ರಿಕೆಯಲ್ಲಿದ್ದ ಮಾಹಿತಿಯನ್ನು ಬರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ತಾನು ಸರಿಯಾಗಿ ಗಮನ ಹರಿಸಿರಲಿಲ್ಲ. ಯಾವುದೇ ತಪ್ಪು ಆಗಿದ್ದರೂ ಅದು ಬಸವರಾಜ್‌ನಿಂದಲೇ ಆಗಿದೆ. ಬಸವರಾಜ್ ಪ್ರಶ್ನೆಪತ್ರಿಕೆಯನ್ನ ಕಳ್ಳತನ ಮಾಡಿದ್ದಾನೆ ಎಂಬುದು ಈಗ ಗೊತ್ತಾಗಿದೆ ಎಂದು ಗ್ಯಾನೇಂದ್ರ ಹೇಳಿಕೆ ನೀಡಿದ್ದಾರಂತೆ.

ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಮನೆಯಲ್ಲೇ ಪರಿಶೀಲನೆ ನಡೆಸಿದ ವಿಚಾರವೂ ತನಿಖೆಯ ಪ್ರಮುಖ ಅಂಶವಾಗಿ ಪರಿಣಮಿಸಿದೆ. ಪ್ರಶ್ನೆಪತ್ರಿಕೆ ಸಂಬಂಧಿತ ವಿಚಾರಣೆ ಮುಂದುವರಿಸಿರುವ CID ಅಧಿಕಾರಿಗಳು, ಇಂದು ಗ್ಯಾನೇಂದ್ರ ಅವರನ್ನು ಅವರ ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ.
7 ಅಭ್ಯರ್ಥಿಗಳ ತಪ್ಪೊಪ್ಪಿಗೆ?
ಇದೇ ವೇಳೆ KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮಹಮದ್ ಸುಹೇಲ್ ಬಳಿಕ ಇನ್ನೂ 7 ಅಭ್ಯರ್ಥಿಗಳು CID ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರಂತೆ. CID ಬಂಧನದ ಭಯದಿಂದ ಅಭ್ಯರ್ಥಿಗಳು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

80 ಲಕ್ಷದಿಂದ 40 ಲಕ್ಷದವರೆಗೆ ‘ರೇಟ್ ಕಾರ್ಡ್’
ಅಭ್ಯರ್ಥಿಗಳ ವಿಚಾರಣೆಯಲ್ಲಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಒಬ್ಬೊಬ್ಬ ಅಭ್ಯರ್ಥಿಯಿಂದ ವಿಭಿನ್ನ ಮೊತ್ತದ ಹಣ ಪಡೆಯಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೆಲವು ಅಭ್ಯರ್ಥಿಗಳು 80 ಲಕ್ಷ ರೂಪಾಯಿವರೆಗೆ, ಇನ್ನೂ ಕೆಲವರು ಸುಮಾರು 40 ಲಕ್ಷ ರೂಪಾಯಿವರೆಗೆ ಹಣ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇವರಲ್ಲಿ ಕೆಲವರು ಮುಂಗಡ ಹಣ ನೀಡಿದ್ದರೆ, ಮತ್ತಷ್ಟು ಅಭ್ಯರ್ಥಿಗಳು ಸಂಪೂರ್ಣ ಹಣ ಪಾವತಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಮದ್ ಸುಹೇಲ್ ಬಳಿಕ 7 ಅಭ್ಯರ್ಥಿಗಳಿಂದ ಬಂದಿದೆ ಎನ್ನಲಾದ ಈ ಹೇಳಿಕೆಗಳು KPSC ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವದ ಸುಳಿವು ನೀಡಿವೆ.
