ಅಮರಾವತಿ: ಆಂಧ್ರಪ್ರದೇಶದ (Andhra Pradesh) ಪೊಲಾವರಂ (Polavaram) ಜಿಲ್ಲೆಯ ಗ್ರಾಮವೊಂದರಲ್ಲಿ ಮಲೇರಿಯಾ ಮಾತ್ರೆ (Anti-Malaria) ಸೇವಿಸಿ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮದಲ್ಲಿ ಮಲೇರಿಯಾ ತಡೆಯಲು 71 ಜನರಿಗೆ ಕ್ಲೋರೊಕ್ವಿನ್ ಮಾತ್ರೆಗಳನ್ನು ನೀಡಲಾಗಿತ್ತು. ಈ ಮಾತ್ರೆ ಸೇವಿಸಿ ನಂತರ ಹಲವರು ಅಸ್ವಸ್ಥಗೊಂಡಿದ್ದು, 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಮದಿವಿ ಜಮುನಾ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹೋಟೆಲ್‌ಗಳಲ್ಲಿ ಊಟ, ತಿಂಡಿ ದರ ಹೆಚ್ಚಳಕ್ಕೆ ಚಿಂತನೆ
ಒಟ್ಟು 52 ಜನರು ಅಸ್ವಸ್ಥಗೊಂಡಿದ್ದು, ಈ ಪೈಕಿ 29 ಜನರನ್ನು ತೆಲಂಗಾಣದ ಆಸ್ಪತ್ರೆಗೆ ಮತ್ತು 24 ಜನರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ದಿನೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ರೋಗಿಗಳು ಆತಂಕಪಡುವ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲಾ ಆಡಳಿತವು ಮೂವರು ಮಕ್ಕಳ ತಜ್ಞರು ಸೇರಿದಂತೆ ವಿಶೇಷ ವೈದ್ಯಕೀಯ ತಂಡಗಳನ್ನು ನಿಯೋಜಿಸಿದ್ದು, ಗ್ರಾಮದಲ್ಲಿ ವೈದ್ಯಕೀಯ ಶಿಬಿರವನ್ನು ಆರಂಭಿಸಿದೆ ಎಂದು ತಿಳಿಸಿದ್ದಾರೆ.
ಕಾಕಿನಾಡದ ಸರ್ಕಾರಿ ಆಸ್ಪತ್ರೆಯಿಂದ 9 ಜನರ ತಜ್ಞರ ತಂಡವು ಈಗಾಗಲೇ ಗ್ರಾಮಕ್ಕೆ ತಲುಪಿದೆ. ಇದರೊಂದಿಗೆ ವಿಜಯವಾಡ, ರಾಜಮಹೇಂದ್ರವರಂ ಮತ್ತು ಕಾಕಿನಾಡದಿಂದ ಇನ್ನೂ ಮೂರು ತಂಡಗಳು ಇಲ್ಲಿಗೆ ಬರಲಿವೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಘಟನೆಗೆ ಕಾರಣವಾದ ಪರಿಸ್ಥಿತಿಗಳು ಮತ್ತು ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದ್ದು, ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಡಿಗ್ರಿಯಲ್ಲಿ 5 ಸಬ್ಜೆಕ್ಟ್ ಫೇಲ್ ಆಗಿದ್ದ ಅಭ್ಯರ್ಥಿ KPSC ನಲ್ಲಿ ಟಾಪರ್; 20 ಲಕ್ಷ ಅಡ್ವಾನ್ಸ್ ಕೊಟ್ಟಿದ್ದ ಸುಹೇಲ್
