ನಟ ಕಿಚ್ಚ ಸುದೀಪ್ (Kichcha Sudeepa) ಅವರು 53 ವಸಂತಗಳನ್ನ ಪೂರೈಸಿ 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು (ಸೆ.2) ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಆದರೆ ಈ ಬಾರಿ ಕಿಚ್ಚ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ, ತಮ್ಮ ಫ್ಯಾನ್ಸ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ನಿರೀಕ್ಷೆಯಂತೆ ಸುದೀಪ್ ಅವರ ಮುಂಬರುವ ಮಹತ್ವದ ಚಿತ್ರದ ಘೋಷಣೆಯಾಗಿದೆ. ಆಕರ್ಷಕ ಟೀಸರ್ ಮೂಲಕ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಾಗಿದ್ದು, ‘ದೇವರಾಯ’ ಎಂಬ ಟೈಟಲ್ (Devaraaya Tittle Announcement) ಗಮನ ಸೆಳೆದಿದೆ.
‘ದೇವರಾಯ’ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಶ್ರೀ ಕೃಷ್ಣದೇವರಾಯರ ಜೀವನಾಧಾರಿತ ಐತಿಹಾಸಿಕ ಚಿತ್ರವಾಗಿದ್ದು, ಸುದೀಪ್ ಅವರು ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನ ಸುವರ್ಣಯುಗದತ್ತ ಕೊಂಡೊಯ್ದ, ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ ಮತ್ತು ಕಲೆಗಳ ಪೋಷಣೆಗೆ ಹೆಸರಾದ ತುಳುವಂಶದ ಅರಸನ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಹಾಗೂ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜಂಟಿಯಾಗಿ ನಿರ್ಮಿಸುತ್ತಿವೆ. ಪ್ರಿಯಾ ಸುದೀಪ್ ಅವರು ಚಿತ್ರವನ್ನು ಅರ್ಪಿಸುತ್ತಿದ್ದು, ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಅವರು ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ಶೀರ್ಷಿಕೆ, ಪೋಸ್ಟರ್ ಮೂಲಕವೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ಚಿತ್ರತಂಡ, ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ನಿರ್ದೇಶಿಸಲಿರುವ ನಿರ್ದೇಶಕರ ಹೆಸರನ್ನು ಮಾತ್ರ ಗೌಪ್ಯವಾಗಿಟ್ಟಿದೆ. ಆದರೆ ಚಿತ್ರಕ್ಕೆ ತೆಲುಗು ಮೂಲದ ನಿರ್ದೇಶಕರೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ‘ದೇವರಾಯ’ದಂತಹ ಬೃಹತ್ ಐತಿಹಾಸಿಕ ಚಿತ್ರಕ್ಕೆ ಭಾರೀ ಪ್ರಮಾಣದ ಚಿತ್ರೀಕರಣ ಹಾಗೂ ತಾಂತ್ರಿಕ ಸಿದ್ಧತೆಗಳ ಅಗತ್ಯವಿರುವುದರಿಂದ, ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ತರುವ ಯೋಜನೆಯನ್ನ ಚಿತ್ರತಂಡ ಹಾಕಿಕೊಂಡಿದೆ.
