ಕೊಪ್ಪಳ: ಜಿಲ್ಲೆಯ ಶಿವಪುರ ಗ್ರಾಮದ ಸಮೀಪದ ಕಲ್ಲು ಕ್ವಾರಿಯಲ್ಲಿ ಇಂದು ಅವಘಡ ಸಂಭವಿಸಿದ್ದು, ಭಾರೀ ದುರಂತವೊಂದು ತಪ್ಪಿದೆ.
ಕಲ್ಲು ಗಣಿಗಾರಿಕೆ ವೇಳೆ ಬೃಹತ್ ಬಂಡೆಯೊಂದು ಏಕಾಏಕಿ ಜೆಸಿಬಿ ಯಂತ್ರದ ಮೇಲೆ ಉರುಳಿ ಬಿದ್ದ ಪರಿಣಾಮ ಜೆಸಿಬಿ ಸಂಪೂರ್ಣವಾಗಿ ಜಖಂ ಗೊಂಡಿದೆ. ಅದೃಷ್ಟವಶಾತ್ ಚಾಲಕ ಹಾಗೂ ಸ್ಥಳದಲ್ಲಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: SIR ರೂಲ್ಸ್ ಪಾಲಿಸದ 35 ಬಿಎಲ್‌ಒಗಳ ವಿರುದ್ಧ ಕ್ರಮ – ಸಾಮೂಹಿಕ ಅರ್ಜಿ ಭರ್ತಿಗೆ ಆಯೋಗ ಬ್ರೇಕ್

ಶಿವಪುರ ಕೆರೆಯ ಸಮೀಪ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ವೇಳೆ ಈ ಘಟನೆ ಸಂಭವಿಸಿದೆ. ಕಲ್ಲಿನ ಬಂಡೆಯ ಕೆಳಭಾಗದ ಮಣ್ಣನ್ನು ಜೆಸಿಬಿ ಮೂಲಕ ತೆಗೆಯುವ ವೇಳೆ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆ ಏಕಾಏಕಿ ಉರುಳಿ ಬಿದ್ದು ನೇರವಾಗಿ ಜೆಸಿಬಿ ಮೇಲೆ ಬಿದ್ದಿದೆ. ಪರಿಣಾಮ ಜೆಸಿಬಿ ಬಂಡೆಯಡಿ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಯಶಸ್ವಿ ಹೆರಿಗೆ – ತಾಯಿ, ಮಗುವಿನ ಪ್ರಾಣ ಉಳಿಸಿದ ಮೂವರು ಆಯುರ್ವೇದ ವೈದ್ಯೆಯರು
ಘಟನೆ ಸಂಭವಿಸುವ ಕೆಲ ಕ್ಷಣಗಳ ಮೊದಲು ಚಾಲಕ ಹಾಗೂ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ಸರಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ವಲ್ಪದರಲ್ಲಿ ದೊಡ್ಡ ದುರಂತ ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಣಿಗಾರಿಕೆ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದ್ದು, ಸುರಕ್ಷತಾ ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಈ ಘಟನೆ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
