ಮಡಿಕೇರಿ: ಸ್ವಾತಂತ್ರ್ಯ (80th Independence Day) ದಿನದಂದು ಆಸ್ಟ್ರೇಲಿಯಾದ (Australia) ಅತಿ ಎತ್ತರದ ಮೌಂಟ್ ಕೊಸ್ಸಿಯಸ್ಕೊ ಶಿಖರದ ತುತ್ತತುದಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದವರು ಕೊಡಗಿನ (Kodagu) ದಿಟ್ಟ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ.

ಹಿಮ, ಕೊರೆವ ಚಳಿ ಮತ್ತು ಪ್ರಬಲ ಗಾಳಿಯ ನಡುವೆಯೂ ಶಿಖರ ತಲುಪಿ, ಕೊಡವ ಸಾಂಪ್ರದಾಯಿಕ ಉಡುಪಿನಲ್ಲೇ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಪ್ರೇಮದ ಜೊತೆಗೆ ಕೊಡಗಿನ ಅಸ್ಮಿತೆಯನ್ನೂ ವಿಶ್ವದ ಮುಂದೆ ಅನಾವರಣಗೊಳಿಸಿದ್ದಾರೆ. ಆಗಸ್ಟ್ 10ರಿಂದ 19ರವರೆಗೆ ನಡೆಯುತ್ತಿರುವ ಶಿಖರಾರೋಹಣ ಸಾಹಸದ ಭಾಗವಾಗಿ ಜಮ್ಮಡ ಪ್ರೀತ್ ಅಪ್ಪಯ್ಯ ಆಸ್ಟ್ರೇಲಿಯಾದ ಅತಿ ಎತ್ತರದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಇದನ್ನೂ ಓದಿ: 80ನೇ ಸ್ವಾತಂತ್ರ್ಯ ದಿನಾಚರಣೆ – ವಿಧಾನಸೌಧ ಮುಂಭಾಗ ಅದ್ಧೂರಿ `ಫ್ರೀಡಂ ಹಬ್ಬ’
ಸ್ವಾತಂತ್ರ್ಯ ದಿನದ ವಿಶೇಷ ಸಂದರ್ಭದಲ್ಲಿ ಶಿಖರದ ತುತ್ತತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ. ಹಿಮದಿಂದ ಆವೃತವಾದ ಪರ್ವತ, ಕೊರೆವ ಚಳಿ ಮತ್ತು ಬಿರುಗಾಳಿಯಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಅವರ ಸಾಹಸ ಮೆಚ್ಚುಗೆಗೆ ಪಾತ್ರವಾಗಿದೆ. ವಿಶೇಷವೆಂದರೆ, ಶಿಖರವನ್ನು ಕೊಡವ ಸಾಂಪ್ರದಾಯಿಕ ಉಡುಪಿನಲ್ಲೇ ಏರಿ, ಕೊಡಗಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿನ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ.
‘ಸೆವೆನ್ ಸಮಿಟ್ಸ್’ ಎಂಬ ವಿಶ್ವದ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಮಹತ್ವಾಕಾಂಕ್ಷೆಯ ಗುರಿಯತ್ತ ಇದು ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ. ಈಗಾಗಲೇ ಆಫ್ರಿಕಾದ ಕಿಲಿಮಂಜಾರೋ ಹಾಗೂ ಯುರೋಪಿನ ಎಲ್ಬ್ರಸ್ ಶಿಖರಗಳನ್ನು ಯಶಸ್ವಿಯಾಗಿ ಏರಿರುವ ಜಮ್ಮಡ ಪ್ರೀತ್ ಅಪ್ಪಯ್ಯ, ಇದೀಗ ಆಸ್ಟ್ರೇಲಿಯಾದ ಶಿಖರವನ್ನೂ ತಮ್ಮ ಸಾಧನೆಯ ಪಟ್ಟಿಗೆ ಸೇರಿಸಿಕೊಂಡಿದ್ದಾರೆ. ದೇಶಪ್ರೇಮ, ಸಾಹಸ ಮತ್ತು ಕೊಡಗಿನ ಅಸ್ಮಿತೆ ಒಂದೇ ವೇದಿಕೆಯಲ್ಲಿ ಅನಾವರಣಗೊಂಡ ಈ ಸಾಧನೆ, ಜಿಲ್ಲೆಯಷ್ಟೇ ಅಲ್ಲದೆ ಇಡೀ ರಾಜ್ಯದ ಹೆಮ್ಮೆಗೂ ಕಾರಣವಾಗಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಜಾರಿಗೆ ಪಕ್ಷಭೇದ ಮರೆತು ಬೆಂಬಲಿಸಿ: ಮೋದಿ
