ಹರಿಯಾಣದ ಪಿಹೋವಾದ ಅರುಣಾಯ (Arunay) ಗ್ರಾಮದಲ್ಲಿರುವ ಪ್ರಾಚೀನ ಸಂಗಮೇಶ್ವರ ಮಹಾದೇವ ದೇವಸ್ಥಾನ (Sangameshwar Mahadev Temple) ಧಾರ್ಮಿಕ ಮಹತ್ವದ ಜೊತೆಗೆ ಇಂದಿಗೂ ಉತ್ತರ ಸಿಗದ ಅದೆಷ್ಟೋ ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಈ ದೇವಸ್ಥಾನದ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಪ್ರತಿವರ್ಷ ಶಿವಲಿಂಗದ ಮೇಲೆ ಕಾಣಿಸಿಕೊಳ್ಳುತ್ತೆ ಎನ್ನಲಾಗುತ್ತಿರುವ ನಾಗ–ನಾಗಿಣಿಯ ಜೋಡಿ!

ಅಚ್ಚರಿಯ ಸಂಗತಿ ಎಂದರೆ, ಈ ಜೋಡಿ ಹಾವುಗಳು ಎಲ್ಲಿಂದ ಬರುತ್ತವೆ? ಪೂಜೆ-ಅರ್ಚನೆ ನಡೆಯುತ್ತಿದ್ದರೂ ಯಾರಿಗೂ ಹಾನಿ ಮಾಡದೇ ಮತ್ತೆ ಎಲ್ಲಿಗೆ ಮಾಯವಾಗುತ್ತವೆ? ಈ ಪ್ರಶ್ನೆಗಳಿಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಇದುವರೆಗೆ ನಾಗ–ನಾಗಿಣಿಯ ಜೋಡಿ ಕಾಣಿಸಿಕೊಂಡಿಲ್ಲ ಎಂಬುದು ಭಕ್ತರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಪುರಾಣ ಪುಣ್ಯಕಥೆ ಹೇಳುವುದೇನು?
ಪುರಾಣ ಕಥೆಗಳ ಪ್ರಕಾರ, ಋಷಿ ವಿಶ್ವಾಮಿತ್ರನ ಶಾಪದಿಂದ ಮುಕ್ತರಾಗಲು ದೇವಿ ಸರಸ್ವತಿ ಇದೇ ಕ್ಷೇತ್ರದಲ್ಲಿ ಭಗವಾನ್ ಶಿವನ ಆರಾಧನೆ ಮಾಡಿದ್ದಳು ಎನ್ನಲಾಗುತ್ತದೆ. ಮಹರ್ಷಿ ವಶಿಷ್ಠ ಮತ್ತು ವಿಶ್ವಾಮಿತ್ರರ ನಡುವೆ ತಪೋಬಲದ ವಿಚಾರದಲ್ಲಿ ಪೈಪೋಟಿ ನಡೆದಿತ್ತು. ಆಗ ವಿಶ್ವಾಮಿತ್ರನು ಸರಸ್ವತಿಯನ್ನು ಉಪಾಯದಿಂದ ವಶಿಷ್ಠರನ್ನು ತನ್ನ ಆಶ್ರಮದ ಬಳಿಗೆ ಕರೆತರಲು ಸೂಚಿಸಿದನು. ಶಾಪದ ಭಯದಿಂದ ಸರಸ್ವತಿ ವೇಗವಾಗಿ ಹರಿದು ವಶಿಷ್ಠರನ್ನು ವಿಶ್ವಾಮಿತ್ರನ ಆಶ್ರಮದ ದ್ವಾರದವರೆಗೆ ಕರೆದೊಯ್ದಳು. ಆದರೆ ವಿಶ್ವಾಮಿತ್ರನು ವಶಿಷ್ಠರತ್ತ ಸಾಗುತ್ತಿದ್ದಾಗ ಸರಸ್ವತಿ ತನ್ನ ಹರಿವಿನ ದಿಕ್ಕನ್ನು ಬದಲಿಸಿ ವಶಿಷ್ಠರನ್ನು ಪೂರ್ವದತ್ತ ಕರೆದೊಯ್ದಳು.
ಇದರಿಂದ ಕೋಪಗೊಂಡ ವಿಶ್ವಾಮಿತ್ರನು ಸರಸ್ವತಿಗೆ ರಕ್ತದ ರೂಪದಲ್ಲಿ ಹರಿಯುವಂತೆ ಶಾಪ ನೀಡಿದನು ಎನ್ನುವುದು ಪೌರಾಣಿಕ ನಂಬಿಕೆ. ಸರಸ್ವತಿ ರಕ್ತಧಾರೆಯಾಗಿ ಹರಿಯಲು ಆರಂಭಿಸಿದಾಗ ನದಿಯ ತೀರದಲ್ಲಿ ರಾಕ್ಷಸರು ನೆಲೆಸಿದರು. ಆ ಸಂದರ್ಭದಲ್ಲಿ ಮಹರ್ಷಿ ವಶಿಷ್ಠರು ಸರಸ್ವತಿಗೆ ಇಲ್ಲಿ ಪ್ರತ್ಯಕ್ಷವಾಗಿದ್ದ ಶಿವಲಿಂಗವನ್ನ ಆರಾಧಿಸುವಂತೆ ತಿಳಿಸಿದರು. ಸರಸ್ವತಿ ಈ ತೀರ್ಥಕ್ಷೇತ್ರದಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಿದಾಗ, ಶಿವನು ಪ್ರಸನ್ನನಾಗಿ ವಿಶ್ವಾಮಿತ್ರನ ಶಾಪದಿಂದ ಆಕೆಯನ್ನು ಮುಕ್ತಗೊಳಿಸಿ ಮತ್ತೆ ಜಲಧಾರೆಯ ರೂಪದಲ್ಲಿ ಹರಿಯುವಂತೆ ಮಾಡಿದನು ಎನ್ನಲಾಗುತ್ತದೆ. ಅಂದಿನಿಂದ ಈ ಸ್ಥಳದಲ್ಲಿ ಶಿವಾರಾಧನೆ ಆರಂಭವಾಯಿತು ಎಂಬ ನಂಬಿಕೆ ಇದೆ.

ಅರುಣಾ–ಸರಸ್ವತಿ ನದಿಗಳ ಸಂಗಮದ ಸ್ಥಳ
ಪ್ರಾಚೀನ ಕಾಲದಿಂದಲೂ ಅರುಣಾಯವನ್ನು ಅರುಣಾ ಮತ್ತು ಸರಸ್ವತಿ ನದಿಗಳ ಸಂಗಮದ ಸ್ಥಳವೆಂದು ಪರಿಗಣಿಸಲಾಗಿದೆ. ದೇವಸ್ಥಾನದ ಸಮೀಪ ಸರಸ್ವತಿ ನದಿ ಹರಿಯುತ್ತದೆ ಎನ್ನಲಾಗುತ್ತದೆ. ಈ ಕಾರಣದಿಂದಲೇ ಈ ಕ್ಷೇತ್ರಕ್ಕೆ ‘ಸಂಗಮೇಶ್ವರ’ ಎಂಬ ಹೆಸರು ಬಂದಿರುವುದಾಗಿ ಸ್ಥಳೀಯವಾಗಿ ನಂಬಲಾಗಿದೆ.
ಹರಕೆ ಕಟ್ಟಿದರೆ ಮನೋಕಾಮನೆ ಈಡೇರುತ್ತದೆ?
ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸುವುದರ ಜೊತೆಗೆ, ಇಲ್ಲಿನ ಬಿಲ್ವವೃಕ್ಷಕ್ಕೆ ಹರಕೆಯ ದಾರ ಕಟ್ಟಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬುದು ಸಹಸ್ರಾರು ಭಕ್ತರ ನಂಬಿಕೆ. ಅದಕ್ಕಾಗಿಯೇ ದೊಡ್ಡ ದೊಡ್ಡ ರಾಜಕಾರಣಿಗಳು, ವ್ಯಾಪಾರಿಗಳು ಸೇರಿದಂತೆ ಅನೇಕ ಭಕ್ತರು ತಮ್ಮ ಹರಕೆ ಈಡೇರಲಿ ಎಂದು ಬಿಲ್ವವೃಕ್ಷಕ್ಕೆ ದಾರ ಕಟ್ಟುತ್ತಾರೆ. ಹರಕೆ ಈಡೇರಿದ ಬಳಿಕ ಆ ದಾರವನ್ನು ತೆಗೆಯುವ ಸಂಪ್ರದಾಯವೂ ಇದೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕ ಮಾಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ, ಬೆಳಗ್ಗಿನಿಂದಲೂ ಸಾಲುಗಟ್ಟಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಈ ಸಾಲುಗಳು ದೇವಸ್ಥಾನದ ಪ್ರವೇಶದ್ವಾರವನ್ನೂ ದಾಟಿ ರಸ್ತೆಯವರೆಗೂ ತಲುಪುತ್ತವೆ.

ಸಣ್ಣ ಕುಂಡವೂ ಭಕ್ತರ ಆಕರ್ಷಣೆ
ದೇವಸ್ಥಾನ ಆವರಣದಲ್ಲಿ ಒಂದು ಸಣ್ಣ ಕುಂಡವಿದ್ದು, ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದರ ದರ್ಶನ ಪಡೆಯಲು ಆಗಮಿಸುತ್ತಾರೆ. ಕಾವಾಡಿಗರು ಕೂಡ ಇಲ್ಲಿ ವಿಶೇಷವಾಗಿ ಆಗಮಿಸಿ ಗಂಗಾಜಲದಿಂದ ಸಂಗಮೇಶ್ವರನಿಗೆ ಅಭಿಷೇಕ ಮಾಡುತ್ತಾರೆ. ದೇವರ ದರ್ಶನ ಪಡೆದು ನಮಸ್ಕರಿಸಿದ ಬಳಿಕವೇ ತಮ್ಮ ಮನೆಗಳತ್ತ ಮರಳುತ್ತಾರೆ.
ದಿಮ್ಮಿ ಹುಳಗಳ ಹುತ್ತದಲ್ಲಿ ಪತ್ತೆಯಾದ ಶಿವಲಿಂಗ
ದೇವಸ್ಥಾನದ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ… ಹಿಂದಿನ ಕಾಲದಲ್ಲಿ ಮಹಾತ್ಮ ಗಣೇಶ್ ಗಿರಿ ತಮ್ಮ ಶಿಷ್ಯರೊಂದಿಗೆ ಇದ್ದಾಗ ಹುಲ್ಲಿನ ನಡುವೆ ದಿಮ್ಮಿ ಹುಳಗಳ ಹುತ್ತವೊಂದು ಕಾಣಿಸಿತು. ಕುತೂಹಲದಿಂದ ಅವರು ತಮ್ಮ ಚಿಮಟೆಯಿಂದ ಹುತ್ತವನ್ನ ಕೆದಕಿದಾಗ, ಒಳಗೆ ಯಾವುದೋ ಗಟ್ಟಿಯಾದ ವಸ್ತು ತಾಗಿದ ಅನುಭವವಾಯಿತು. ದಿಮ್ಮಿ ಹುಳಗಳ ಮಣ್ಣನ್ನು ತೆರವುಗೊಳಿಸಿ ನೋಡಿದಾಗ, ಅತ್ಯಂತ ಸುಂದರ ಹಾಗೂ ತೇಜಸ್ವಿಯಾದ ಶಿವಲಿಂಗವೊಂದು ಕಾಣಿಸಿಕೊಂಡಿತ್ತಂತೆ. ಶಿವಲಿಂಗವನ್ನು ಅಲ್ಲಿಂದ ತೆಗೆದು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಅವರು ನಿರ್ಧರಿಸಿದರು. ಆದರೆ ಶಿವಲಿಂಗವನ್ನು ಹೊರತೆಗೆಯಲು ನಡೆಸಿದ ಪ್ರಯತ್ನ ಸಂಜೆವರೆಗೂ ಮುಂದುವರಿದರೂ ಅದರ ತುದಿ ಕೂಡ ಪತ್ತೆಯಾಗಲಿಲ್ಲ. ಮರುದಿನ ಬೆಳಗ್ಗೆ ಸ್ಥಳಕ್ಕೆ ಬಂದಾಗ, ಶಿವಲಿಂಗಕ್ಕೆ ಒಂದು ಸರ್ಪ ಸುತ್ತಿಕೊಂಡಿರುವುದು ಕಂಡುಬಂದಿತು ಎನ್ನುವುದು ಸ್ಥಳೀಯ ಪರಂಪರೆ.

ಇದನ್ನು ಶಿವನ ಪ್ರೇರಣೆ ಎಂದು ಭಾವಿಸಿದ ಮಹಾತ್ಮ ಗಣೇಶ್ ಗಿರಿ, ಇದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವ ಸಂಕಲ್ಪ ಮಾಡಿದರಂತೆ. ಇಂದು ಅದೇ ಸ್ಥಳದಲ್ಲಿ ಭವ್ಯ ಸಂಗಮೇಶ್ವರ ಮಹಾದೇವ ದೇವಸ್ಥಾನ ನಿರ್ಮಾಣಗೊಂಡಿದ್ದು, ಪ್ರಸ್ತುತ ದೇವಸ್ಥಾನದ ನವೀಕರಣ ಹಾಗೂ ಪುನರ್‌ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಹೀಗೆ ಉತ್ತರಗಳೇ ಸಿಗದ ಅದೆಷ್ಟೋ ನಿಗೂಡ ರಹಸ್ಯಗಳನ್ನು ಈ ದೇವಸ್ಥಾನ ಹೊಂದಿದೆ.
ದೇವಸ್ಥಾನಕ್ಕೆ ಹೇಗೆ ತೆರಳಬೇಕು?
ಸಂಗಮೇಶ್ವರ ಮಹಾದೇವ ದೇವಸ್ಥಾನವು ಅಂಬಾಲಾ ರಸ್ತೆಯಲ್ಲಿರುವ ಪಿಹೋವಾದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಅರುಣಾಯ ಗ್ರಾಮದಲ್ಲಿ ಇದೆ. ಪಿಹೋವಾದಿಂದ ಖಾಸಗಿ ವಾಹನದಲ್ಲಿ ದೇವಸ್ಥಾನಕ್ಕೆ ಸುಲಭವಾಗಿ ತೆರಳಬಹುದು. ಜೊತೆಗೆ ಪಿಹೋವಾದಿಂದ ಸಂಚರಿಸುವ ಬಸ್‌ಗಳ ಮೂಲಕವೂ ಅರುಣಾಯ ಗ್ರಾಮವನ್ನು ತಲುಪಬಹುದು.
ಧಾರ್ಮಿಕ ನಂಬಿಕೆಗಳು, ಪೌರಾಣಿಕ ಕಥೆಗಳು, ಸರಸ್ವತಿ ನದಿಯೊಂದಿಗೆ ಬೆಸೆದುಕೊಂಡಿರುವ ಇತಿಹಾಸ ಹಾಗೂ ನಾಗ–ನಾಗಿಣಿಯ ಜೋಡಿಗೆ ಸಂಬಂಧಿಸಿದ ನಿಗೂಢತೆ…. ಇವೆಲ್ಲವೂ ಅರುಣಾಯದ ಸಂಗಮೇಶ್ವರ ಮಹಾದೇವ ದೇವಸ್ಥಾನವನ್ನು ವಿಶಿಷ್ಟ ಶಿವಕ್ಷೇತ್ರವನ್ನಾಗಿ ಮಾಡಿವೆ. ಭಕ್ತರಿಗೆ ಇದು ಕೇವಲ ದೇವಾಲಯವಲ್ಲ, ನಂಬಿಕೆ, ಪುರಾಣ ಮತ್ತು ನಿಗೂಢತೆಯ ಸಂಗಮವಾಗಿರುವ ಪವಿತ್ರ ತಾಣವಾಗಿದೆ.
