– ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ
– ಬ್ಯಾಟಿಂಗ್ ತಂಡವೇ ಅಂಪೈರ್ ಆಯ್ಕೆ ಮಾಡಿದಂತೆ – ನ್ಯಾ. ದತ್ತಾ
– ಸಂವಿಧಾನ ಪೀಠಕ್ಕೆ ಹೋಗುತ್ತಾ ಸಿಇಸಿ ನೇಮಕ ವಿವಾದ?
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (CEC) ಹಾಗೂ ಇತರ ಚುನಾವಣಾ ಆಯುಕ್ತರ (EC) ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಹೊರಗಿಡುವ 2023ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ (Supreme Court) ಇಂದು ಭಿನ್ನ ತೀರ್ಪು ನೀಡಿದೆ.
ಈ ಅರ್ಜಿಗಳನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ವಿಚಾರದಲ್ಲಿ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು ಪರಸ್ಪರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ದಿನಗಳ ಕಾಲ ಸತತ ವಿಚಾರಣೆ ನಡೆಸಿದ ನ್ಯಾ. ದೀಪಂಕರ್ ದತ್ತಾ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ತೀರ್ಪು ನೀಡಿದೆ.
ನಾವಿಬ್ಬರೂ ಒಮ್ಮತದ ತೀರ್ಪು ನೀಡಿದ್ದರೆ ಅದು ಸಾಂಸ್ಥಿಕ ಒಗ್ಗಟ್ಟಿನ ದೃಷ್ಟಿಯಿಂದ ಉತ್ತಮವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ಅಭಿಪ್ರಾಯ ಭೇದ ಉಂಟಾಗಿದೆ. ಹೀಗಾಗಿ ನಾನು ಹೆಚ್ಚು ವಿಸ್ತಾರವಾದ ಆದೇಶ ಬರೆಯಬೇಕಾಯಿತು ಎಂದು ನ್ಯಾಯಮೂರ್ತಿ ದತ್ತಾ ಉಲ್ಲೇಖಿಸಿದ್ದಾರೆ.
ಈ ಅರ್ಜಿಗಳು ಗಂಭೀರ ಸಂವಿಧಾನಾತ್ಮಕ ಪ್ರಶ್ನೆಗಳನ್ನು ಒಳಗೊಂಡಿದ್ದು, ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಮೂರ್ತಿ ದತ್ತಾ ತಿರಸ್ಕರಿಸಿದರು. ಆದರೆ ನ್ಯಾಯಮೂರ್ತಿ ಶರ್ಮಾ ಅವರು ಕೇಂದ್ರದ ವಾದವನ್ನು ಬೆಂಬಲಿಸಿ, ದತ್ತಾ ಅವರ ನಿಲುವಿಗೆ ಭಿನ್ನಮತ ವ್ಯಕ್ತಪಡಿಸಿದರು.
ಅಂತಿಮವಾಗಿ ಸಂವಿಧಾನ ಪೀಠವನ್ನು ರಚಿಸಬೇಕೇ ಹಾಗೂ ಇಂತಹ ಸಾಂವಿಧಾನಿಕ ವಿಚಾರಗಳನ್ನು ಇತ್ಯರ್ಥಪಡಿಸಲು ಶಾಶ್ವತ ಪೀಠವನ್ನೇ ಸ್ಥಾಪಿಸಬಹುದೇ ಎಂಬ ನಿರ್ಧಾರವನ್ನು ಕೈಗೊಳ್ಳಲು ಇಬ್ಬರೂ ನ್ಯಾಯಮೂರ್ತಿಗಳು ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: SIR ಬಗ್ಗೆ ಚುನಾವಣಾ ಆಯೋಗದಲ್ಲಿ ಭಿನ್ನಮತವಿಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದ ಕೂಡಿವೆ: ಆಯೋಗ ಸ್ಪಷ್ಟನೆ
ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸರ್ಕಾರದ ಪ್ರಭಾವವನ್ನು ವಿವರಿಸಲು ನ್ಯಾ. ದತ್ತಾ ಕ್ರಿಕೆಟ್‌ನ ಉದಾಹರಣೆ ನೀಡಿದ್ದಾರೆ. ಬ್ಯಾಟಿಂಗ್ ಮಾಡಲು ಇಳಿಯುವ ತಂಡವೇ ಅಂಪೈರ್ ಅನ್ನು ತಾನೇ ಆಯ್ಕೆ ಮಾಡಿಕೊಂಡರೆ, ನಿಸ್ಪಕ್ಷಪಾತತೆಯ ಬಗ್ಗೆ ಸಂಶಯ ಮೂಡುವುದು ಸಹಜ. ಆ ಅಂಪೈರ್ ಸರಿಯಾದ ತೀರ್ಪು ನೀಡಿದರೂ ಅವರ ನಿಷ್ಪಕ್ಷಪಾತತೆಯು ಅನುಮಾನದ ನೆರಳಿನಲ್ಲೇ ಇರುತ್ತದೆ. ಅಂತಹ ಅಂಪೈರ್ ಆ ತಂಡಕ್ಕೆ ನಿಷ್ಠರಾಗಿರುತ್ತಾರೆ ಎಂದೇ ಜನ ಭಾವಿಸುತ್ತಾರೆ. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯೂ ಇಂತಹ ಅನುಮಾನಗಳಿಂದ ಮುಕ್ತವಾಗಿರಬೇಕು. ಚುನಾವಣಾ ಆಯೋಗವು ಕೇವಲ ಸ್ವತಂತ್ರವಾಗಿದ್ದರೆ ಸಾಲದು, ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜನರಿಗೆ ಕಾಣಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಸಂಪೂರ್ಣ ಸ್ವತಂತ್ರ ಚುನಾವಣಾ ಆಯೋಗವನ್ನು ಅವಲಂಬಿಸಿವೆ ಎಂದು ಅವರು ಉಲ್ಲೇಖಿಸಿದರು.
2023ರ ಮಾರ್ಚ್ 2ರಂದು ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಚುನಾವಣಾ ಆಯೋಗವನ್ನು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಿಸಲು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಸಿಇಸಿ ಮತ್ತು ಇಸಿಗಳನ್ನು ನೇಮಿಸಬೇಕು ಎಂದು ಆದೇಶಿಸಿತ್ತು. ಆದರೆ ನಂತರ ಕೇಂದ್ರ ಸರ್ಕಾರವು ಕಾನೂನು ತಿದ್ದುಪಡಿ ತಂದು ಸಿಜೆಐ ಬದಲಿಗೆ ಪ್ರಧಾನಿ ನೇಮಿಸುವ ಕೇಂದ್ರ ಸಚಿವರೊಬ್ಬರನ್ನು ಸಮಿತಿಗೆ ಸೇರಿಸಿ ಕಾಯ್ದೆ ರೂಪಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದನ್ನೂ ಓದಿ: ನೀವು ಮಾಡಿರೋದು ದೇಶದ್ರೋಹ; ಟೈಂ ಬರುತ್ತೆ, ನಿಮ್ಮನ್ನ ಹಿಡಿಯುತ್ತೇವೆ – ರಾಹುಲ್ ಗಾಂಧಿ ಎಚ್ಚರಿಕೆ

