– ಮತ ರಕ್ಷಣೆಗಾಗಿ ರೆಸಾರ್ಟ್ ಮೊರೆ ಹೋದ ಕಾಂಗ್ರೆಸ್
ರಾಮನಗರ: ರಾಜ್ಯಸಭಾ (Rajya Sabha Elections) ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ (MLC Polls) ಹಿನ್ನೆಲೆ ಕಾಂಗ್ರೆಸ್ ಪಕ್ಷ ತನ್ನ ಮತಗಳ ರಕ್ಷಣೆಗಾಗಿ ರೆಸಾರ್ಟ್ ಮೊರೆಹೋಗಿದ್ದು. ಇಂದು ಬಿಡದಿಯ ವಂಡರ್ ಲಾ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಲಿರುವ ಕಾಂಗ್ರೆಸ್ ಶಾಸಕರು, ಜೂ.18ರಂದು ರೆಸಾರ್ಟ್‌ನಿಂದಲೇ ನೇರವಾಗಿ ವಿಧಾನಸೌದಕ್ಕೆ ತೆರಳಿ ಮತದಾನ ಮಾಡಲಿದ್ದಾರೆ.
ಚುನಾವಣೆ ಹಿನ್ನೆಲೆ ಇಂದು ಸಂಜೆ 6:15ಕ್ಕೆ ಬಿಡದಿಯ (Bidadi) ವಂಡರ್ ಲಾ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ಜರುಗಲಿದೆ. ಇದನ್ನೂ ಓದಿ: ಸರ್ಕಾರದಿಂದ ಗ್ಯಾರಂಟಿ ಶಾಕ್ – ಪರಿಷ್ಕರಣೆಯಿಂದ ಬರೋಬ್ಬರಿ 100 ಕೋಟಿ ಉಳಿತಾಯ!
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸೇರಿ ಕಾಂಗ್ರೆಸ್‌ನ ಎಲ್ಲಾ ಸಚಿವರು, ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ರೆಸಾರ್ಟ್‌ಗೆ ಕಾಂಗ್ರೆಸ್ ಶಾಸಕರು ಆಗಮಿಸಲಿದ್ದಾರೆ.
ಸಿಎಲ್‌ಪಿ ಸಭೆ ಬಳಿಕ ರೆಸಾರ್ಟ್‌ನಲ್ಲೇ ಶಾಸಕರು, ಸಚಿವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಂಡರ್ ಲಾ ರೆಸಾರ್ಟ್‌ನಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು 130 ರೂಂಗಳನ್ನ ಬುಕ್ ಮಾಡಿದ್ದಾರೆ. ನಾಳೆ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿ ಜೂ.18ರಂದು ಬೆಳಗ್ಗೆ ಇಲ್ಲಿಂದಲೇ ನೇರವಾಗಿ ವಿಧಾನಸೌದಕ್ಕೆ ತೆರಳಿ ಮತದಾನ ಮಾಡಲಿದ್ದಾರೆ.
ರೆಸಾರ್ಟ್‌ಗೆ ಸಿಎಂ ಆಗಮನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟ ಹಿನ್ನೆಲೆ ಸಿಎಂ ಸಾಗುವ ಮಾರ್ಗದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 6 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: 10 ದಿನದಲ್ಲೇ ಕುಸಿದ 33 ಕೋಟಿ ವೆಚ್ಚದ ಕಾಮಗಾರಿ – ಪ್ರಶ್ನಿಸಿದ್ದಕ್ಕೆ ಸ್ಥಳೀಯರ ವಿರುದ್ಧ ಅಶ್ಲೀಲ ಪದ ಬಳಸಿ ತುಕಾರಾಂ ನಿಂದನೆ
