ಮೈಸೂರು: ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರು ವಿಧಿವಶರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಶೋಕದ ವಾತಾವರಣ ನಿರ್ಮಾಣವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ(Maharaja College Ground) ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನೆಚ್ಚಿನ ಗಾಯಕಿಯನ್ನು ಕಳೆದುಕೊಂಡ ಅಭಿಮಾನಿಗಳು ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ.
ಸಾರ್ವಜನಿಕರ ದರ್ಶನ ಆರಂಭವಾಗುತ್ತಿದ್ದಂತೆಯೇ ಮೈದಾನದಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ಅಭಿಮಾನಿಗಳು ಶಿಸ್ತಿನಿಂದ ಸರದಿಯಲ್ಲಿ ಬಂದು ಭಾವುಕರಾಗಿ ಕೈಮುಗಿದು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
“ನಾವು ಅವರ ಹಾಡುಗಳನ್ನು ಕೇಳುತ್ತಲೇ ಬೆಳೆದವರು. ಇನ್ನುಮುಂದೆ ಅವರು ನಮ್ಮೊಂದಿಗಿಲ್ಲ ಎನ್ನುವುದೇ ದೊಡ್ಡ ನೋವಿನ ಸಂಗತಿ. ಅವರು ಬದುಕಿದ್ದಾಗ ನಮಗೆ ಅವರನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ, ಇವತ್ತು ಕೊನೆಯ ಬಾರಿಯಾದರೂ ಅಮ್ಮನನ್ನು ನೋಡುವ ಭಾಗ್ಯ ಸಿಕ್ಕಿರುವುದು ನಮ್ಮ ಪುಣ್ಯ. ಮುಂದಿನ ಜನ್ಮದಲ್ಲಿ ಅವರು ನಮ್ಮ ಕರ್ನಾಟಕದಲ್ಲೇ, ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬರಲಿ” ಎಂದು ಅಭಿಮಾನಿಗಳು ಕಣ್ಣೀರು ಸುರಿಸಿದರು.
ಸದ್ಯ ಮಹಾರಾಜ ಕಾಲೇಜು ಮೈದಾನಕ್ಕೆ ಗಣ್ಯರು, ಆಪ್ತರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಲೇ ಇದ್ದು, ಗಾನಕೋಗಿಲೆಯ ಅಂತಿಮ ಯಾತ್ರೆಗೆ ಸಾಕ್ಷಿಯಾಗುತ್ತಿದ್ದಾರೆ.
ಸಾರ್ವಜನಿಕ ಅಂತಿಮ ದರ್ಶನ ಆರಂಭವಾಗುವ ಮುನ್ನ ಮೈಸೂರು ನಗರ ಪೊಲೀಸ್ ಆಯುಕ್ತೆ (ಕಮಿಷನರ್) ಸೀಮಾ ಲಾಟ್ಕರ್ ಅವರು ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು. ಅಭಿಮಾನಿಗಳ ದಂಡೇ ಹರಿದುಬರುತ್ತಿರುವುದರಿಂದ ಸ್ಥಳದಲ್ಲಿ ಯಾವುದೇ ಗೊಂದಲವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
