ಮುಂಬೈ: ಮಹಾರಾಷ್ಟ್ರದಲ್ಲಿ ಹೋಮಿಯೋಪಥಿ (Homoeopaths) ವೈದ್ಯರ ನೋಂದಣಿ ವಿಚಾರವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸ್ಥಳೀಯ ವೈದ್ಯರನ್ನ ಬಾಂಬೆ ಹೈಕೋರ್ಟ್ (Bombay High Court) ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಕ್ಷಣವೇ ಮುಷ್ಕರ ಹಿಂಪಡೆದು ಬಳಿಕ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಮುಷ್ಕರ ಮುಂದುವರಿಸಿದ್ರೆ ‘ಕೆಲಸ ಇಲ್ಲದಿದ್ದರೆ ವೇತನವೂ ಇಲ್ಲ (No Work, No Salary)’ ಎಂಬ ನಿಯಮ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಜೊತೆಗೆ ಪ್ರತಿಭಟನಾ ನಿರತ ವೈದ್ಯರ ವಾದವನ್ನು ಸಂಪೂರ್ಣವಾಗಿ ಆಲಿಸುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ನೇತೃತ್ವದ ವಿಭಾಗೀಯ ಪೀಠ ಭರವಸೆ ನೀಡಿದೆ.
ನ್ಯಾಯಮೂರ್ತಿ ರವೀಂದ್ರ ಘುಗೆ ಹಾಗೂ ನ್ಯಾಯಮೂರ್ತಿ ಗೌತಮ್ ಅಂಖಾಡ್ ಅವರಿದ್ದ ಪೀಠ, ʻಸಾವಿರಾರು ರೋಗಿಗಳ ಆರೋಗ್ಯ ಮತ್ತು ಮಹಾರಾಷ್ಟ್ರದ ಜನರ ಹಿತದ ಬಗ್ಗೆ ನಮಗೆ ಕಾಳಜಿ ಇದೆ. ರೋಗಿಗಳ ಜೀವದ ಜೊತೆಗೆ ಆಟವಾಡ್ತಾ ಯಾಕೆ ಮುಷ್ಕರ ಮಾಡುತ್ತಿದ್ದೀರಿ? ನಾಳೆದಿನ ನಿಮ್ಮ ಹೋರಾಟ ಯಶಸ್ವಿಯಾದರೂ, ಈ ಅವಧಿಯಲ್ಲಿ ಸಾವನ್ನಪ್ಪಿದ ರೋಗಿಗಳ ಜೀವವನ್ನ ಮರಳಿ ತರಲು ಸಾಧ್ಯವೇ?ʼ ಎಂದು ಕಟುವಾಗಿ ಪ್ರಶ್ನಿಸಿದೆ.


ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನ ಸೆಪ್ಟೆಂಬರ್ 8ಕ್ಕೆ ನ್ಯಾಯಾಲಯ ಮುಂದೂಡಿದೆ.
ಮುಷ್ಕರದ ಹಿನ್ನೆಲೆ ಏನು?
ಮಹಾರಾಷ್ಟ್ರ ಸರ್ಕಾರವು ಜೂನ್ 30ರಂದು ಹೊರಡಿಸಿದ ಅಧಿಸೂಚನೆಯ ಅನ್ವಯ, ಹೋಮಿಯೋಪಥಿ ವೈದ್ಯರು ಮಹಾರಾಷ್ಟ್ರ ವೈದ್ಯಕೀಯ ಮಂಡಳಿ (MMC)ಯಲ್ಲಿ ನೋಂದಣಿ ಮಾಡಿಕೊಂಡು ಅಲೋಪಥಿ ಔಷಧಗಳನ್ನ ಸೂಚಿಸಲು ಅವಕಾಶ ನೀಡಿದೆ. ಇದನ್ನ ವಿರೋಧಿಸಿ, ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (MARD) ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.
ಈ ಪ್ರತಿಭಟನೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA), ಮಹಾರಾಷ್ಟ್ರ ರಾಜ್ಯ ರೆಸಿಡೆಂಟ್ ವೈದ್ಯರ ಸಂಘ, ರಾಜ್ಯ ವೈದ್ಯಕೀಯ ಇಂಟರ್ನ್‌ಗಳ ಸಂಘ, ಮಹಾರಾಷ್ಟ್ರ ಗಜೆಟೆಡ್ ವೈದ್ಯಾಧಿಕಾರಿಗಳ ಸಂಘ (ಗ್ರೂಪ್-ಎ) ಹಾಗೂ ಮಹಾರಾಷ್ಟ್ರ ರಾಜ್ಯ ವೈದ್ಯಕೀಯ ಶಿಕ್ಷಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು.
MARD ಪ್ರಮುಖ ಬೇಡಿಕೆ
* ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಅಂಡ್ ಸರ್ಜರಿ – ಸರ್ಟಿಫಿಕೆಟ್ ಕೋರ್ಸ್ ಇನ್ ಮಾಡರ್ನ್ ಫಾರ್ಮಕಾಲಜಿ (BHMS-CCMP) ನೋಂದಣಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
* ಮುಷ್ಕರದ ಮೊದಲ 24 ಗಂಟೆಗಳ ಅವಧಿಯಲ್ಲಿ ತುರ್ತು ಚಿಕಿತ್ಸೆ ಹಾಗೂ ಕ್ಯಾಶುವಾಲಿಟಿ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಸಂಘ ಸ್ಪಷ್ಟಪಡಿಸಿತ್ತು.

