ಬೆಂಗಳೂರು: ವಿಧಾನ ಪರಿಷತ್ ಸಭಾಪತಿ(Legislative Council Chairman) ಬಸವರಾಜ ಹೊರಟ್ಟಿ(Basavaraj Horatti) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕೊನೆಗೂ ಒಪ್ಪಿಗೆ ನೀಡಿದ್ದು, ಆಗಸ್ಟ್ 14 ರಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಆಗಸ್ಟ್ 13 ರಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ನಡೆಯಲಿದೆ. ಆಗಸ್ಟ್ 14 ರಂದು ಅಧಿವೇಶನದ ಎರಡನೇ ದಿನ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನೆರವೇರಿದ ತಕ್ಷಣವೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊರಟ್ಟಿ ತಿಳಿಸಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆ ಸ್ಥಾನದಿಂದ ಬದಲಾಯಿಸದಂತೆ ರಾಜ್ಯ ಸರ್ಕಾರದ ಪ್ರಮುಖ ಸಚಿವರಾದ ಸತೀಶ್ ಜಾರಕಿಹೊಳಿ, ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಯು.ಟಿ. ಖಾದರ್ ಹಾಗೂ ಎನ್.ಎ. ಹ್ಯಾರಿಸ್ ಅವರು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ಹೇರಿದ್ದರು. ಆದರೆ ಸಚಿವರ ಮನವಿಯ ಹೊರತಾಗಿಯೂ ಡಿಕೆ ಶಿವಕುಮಾರ್ ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ.
“ಇದು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ಅಂತಿಮ ತೀರ್ಮಾನ” ಎಂದು ಸ್ಪಷ್ಟಪಡಿಸಿದ ಸಿಎಂ ಸಭಾಪತಿ ಸ್ಥಾನ ತ್ಯಾಗ ಮಾಡುವಂತೆ ಹೊರಟ್ಟಿ ಅವರಲ್ಲಿ ವಿನಂತಿಸಿಕೊಂಡಿದ್ದರು. ಈ ವಿನಂತಿಗೆ ಸ್ಪಂದಿಸಿದ ಹೊರಟ್ಟಿ ರಾಜೀನಾಮೆಗೆ ಸಮ್ಮತಿಸಿದ್ದಾರೆ. ಇದನ್ನೂ ಓದಿ: ನಾನು ಡಿಕೆಶಿ ಮನೆಮಗ, ನಾನೇ ಸಿಎಂ ಇದ್ದಂತೆ: ಶಿವಗಂಗಾ ಬಸವರಾಜ್
ನನ್ನ ಮೇಲೆ ಈ ರೀತಿ ಅವಿಶ್ವಾಸ ವ್ಯಕ್ತಪಡಿಸುವ ಮಾತುಗಳನ್ನಾಡಿರುವುದು ನನ್ನ ಮನಸ್ಸಿಗೆ ತೀವ್ರ ಘಾಸಿ ಉಂಟುಮಾಡಿದೆ. ಇಂತಹ ವಾತಾವರಣದಲ್ಲಿ ಮುಂದುವರಿಯಲು ನನಗೆ ಇಷ್ಟವಿಲ್ಲ, ಆದ್ದರಿಂದಲೇ ರಾಜೀನಾಮೆ ನೀಡುತ್ತಿದ್ದೇನೆ ಎಂದರು.



