ಗಾನಕೋಗಿಲೆ ಎಸ್. ಜಾನಕಿ (S Janaki) ಅವರಿಗೆ ಸ್ವರಗಳೇ ಉಸಿರಾಗಿದ್ದರೆ, ಆ ಜಾನಕಿಯನ್ನೇ ತಮ್ಮ ಪ್ರೀತಿಯ ಉಸಿರಾಗಿಸಿಕೊಂಡವರು ಪತಿ ವಿ. ರಾಮಪ್ರಸಾದ್. ಅನನ್ಯ ಒಡನಾಟ, ನಂಬಿಕೆ ಹಾಗೂ ಅಪಾರ ಪ್ರೇಮದ ಸಂಕೇತವಾಗಿದ್ದ ಇವರ ಸಂಸಾರ ನೌಕೆ ಕೊನೆಯುಸಿರಿರುವವರೆಗೂ ಒಂದು ಮಧುರ ಗೀತೆಯಂತೆ ಸುಂದರವಾಗಿ ಸಾಗಿತು.
ಅದು ಜಾನಕಿ ಅವರ ಬಾಲಪ್ರತಿಭೆ ಅರಳುತ್ತಿದ್ದ ದಿನಗಳು. ವೇದಿಕೆಯೊಂದರಲ್ಲಿ ಜಾನಕಿ ಅವರು ಮಧುರವಾಗಿ ಹಾಡುತ್ತಿದ್ದಾಗ, ಸಭಿಕರಲ್ಲೊಬ್ಬರಾಗಿ ಕುಳಿತಿದ್ದ ರಾಮಪ್ರಸಾದ್ (Ramaprasad) ಅವರು ಮೊದಲ ಬಾರಿಗೆ ಅವರನ್ನು ನೋಡಿದ್ದರು. ಆ ಅಪೂರ್ವ ಕಂಠ ಹಾಗೂ ಮುಗ್ಧ ನೋಟಕ್ಕೆ ರಾಮಪ್ರಸಾದ್ ಮೊದಲ ಭೇಟಿಯಲ್ಲೇ ಸಂಪೂರ್ಣವಾಗಿ ಮನಸೋತರು. ಮುಂದೆ ರಾಮಪ್ರಸಾದ್ ಅವರ ತಂದೆಯ ಮೂಲಕ ಇವರಿಬ್ಬರ ಪರಿಚಯವಾಗಿ, ಆ ಪವಿತ್ರ ಸ್ನೇಹವು ಅಂತಿಮವಾಗಿ ಇಬ್ಬರನ್ನೂ ದಾಂಪತ್ಯದ ಬಂಧಕ್ಕೆ ಕರೆತಂದಿತು.
1956ರಲ್ಲಿ ಜಾನಕಿ ಅವರು ತಮ್ಮ 18ನೇ ವಯಸ್ಸಿನಲ್ಲಿ ರಾಮಪ್ರಸಾದ್ ಅವರ ಕೈಹಿಡಿದರು. ಮದುವೆಯಾದ ಕೇವಲ ಒಂದು ವರ್ಷದಲ್ಲೇ, ಅಂದರೆ 1957ರಲ್ಲಿ ಜಾನಕಿ ಅವರಿಗೆ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಮೊದಲ ಅವಕಾಶ ದೊರೆಯಿತು. ಅಲ್ಲಿಂದ ಜಾನಕಿ ಅವರ ಗಾಯನ ಪಯಣ ಹೊಸ ಇತಿಹಾಸ ಬರೆಯಲು ಆರಂಭಿಸಿತು.
ಜಾನಕಿ ಅವರು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದ ಪತಿ ರಾಮಪ್ರಸಾದ್, ತಮ್ಮ ಪತ್ನಿಯ ಅಪರೂಪದ ಪ್ರತಿಭೆಗೆ ಎಂದೂ ಅಡ್ಡಿಯಾಗಲಿಲ್ಲ. ಬದಲಿಗೆ ಅವರ ಸಂಗೀತ ವೃತ್ತಿಗಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಜಾನಕಿ ಅವರ ಪ್ರತಿ ರೆಕಾರ್ಡಿಂಗ್ ಸೆಷನ್‌ನಲ್ಲೂ ನೆರಳಿನಂತೆ ಜೊತೆಗಿದ್ದು, ಅವರ ಯಶಸ್ಸಿನ ಹಿಂದಿನ ಚಾಲಕ ಶಕ್ತಿಯಾದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿಯನ್ನೇ ನಿರಾಕರಿಸಿದ್ದ ಜಾನಕಿಯಮ್ಮ
ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, “ಅವರು ನನ್ನ ಸಂಗೀತದ ಮಹಾನ್ ಆರಾಧಕರಾಗಿದ್ದರು. ರೆಕಾರ್ಡಿಂಗ್ ಸಮಯದಲ್ಲಿ ನನ್ನನ್ನು ಒಂದು ಕ್ಷಣವೂ ಒಬ್ಬಳನ್ನೇ ಬಿಡುತ್ತಿರಲಿಲ್ಲ, ನನಗೂ ಅವರನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ. ನನಗಾಗಿ ಅವರು ತಮ್ಮ ಇಡೀ ಬದುಕನ್ನೇ ಅರ್ಪಿಸಿದರು. ಅವರ ಈ ನಿಸ್ವಾರ್ಥ ಬೆಂಬಲವಿಲ್ಲದಿದ್ದರೆ ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ” ಎಂದು ಪತಿಯನ್ನು ನೆನೆದು ಕಣ್ಣಾಲಿಗಳನ್ನು ತುಂಬಿಕೊಂಡಿದ್ದಾರೆ.
ರಾಮು-ಜಾನಕಿ ದಾಂಪತ್ಯ ಕೇವಲ ಪತಿ-ಪತ್ನಿಯ ಸಂಬಂಧವಾಗಿರಲಿಲ್ಲ, ಅದು ಎರಡು ಆತ್ಮಗಳ ಅಪರೂಪದ ಮಿಲನವಾಗಿತ್ತು. 1997ರಲ್ಲಿ ರಾಮಪ್ರಸಾದ್ ಅವರು ನಿಧನರಾದಾಗ ಜಾನಕಿಯಮ್ಮ ಅವರ ಬದುಕೇ ಶೂನ್ಯವಾಯಿತು. ಪತಿಯ ಅಗಲಿಕೆಯ ದುಃಖದಲ್ಲಿ ಅವರು ರೇಷ್ಮೆ ಸೀರೆ, ಬಣ್ಣದ ಉಡುಪು, ಕುಂಕುಮ, ಮಲ್ಲಿಗೆ ಎಲ್ಲವನ್ನೂ ತೊರೆದು ಶ್ವೇತವಸ್ತ್ರಧಾರಿಣಿಯಾದರು. ಆದರೆ, ಪತಿಯ ಮೇಲಿನ ಪ್ರೇಮದ ಸಂಕೇತವಾಗಿ ಸೀರೆಗೊಂದು ‘ಗುಲಾಬಿ ಹೂ’ ಮುಡಿಯುವ ಮೂಲಕ ಅವರ ಸವಿನೆನಪನ್ನು ಅಮರವಾಗಿಸಿಕೊಂಡರು. ಇದನ್ನೂ ಓದಿ: ಬಿಳಿ ಸೀರೆಗೆ ಗುಲಾಬಿ ಮುಡಿಸುತ್ತಿದ್ದ ಜಾನಕಿ!
