ಫ್ಲೋರಿಡಾ: ಮಿಯಾಮಿಯಲ್ಲಿ ನಡೆದ ಫಿಫಾ ವಿಶ್ವಕಪ್ 2026 ರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್(England) ವಿರುದ್ಧ 1-2 ಗೋಲುಗಳಿಂದ ಸೋತು ಹೊರಬಿದ್ದ ನಾರ್ವೆ(Norway) ತಂಡದ ಅಭಿಮಾನಿಗಳು ಮತ್ತು ಆಟಗಾರರು ಈಗ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಗಳಿಸಿದ ಮೊದಲ ಸಮಬಲದ ಗೋಲಿನ ಸುತ್ತ ಭಾರಿ ವಿವಾದ ಸೃಷ್ಟಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಏನಿದು ವಿವಾದ?
ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (45+2ನೇ ನಿಮಿಷ) ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಂ(Jude Bellingham) ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದ್ದರು. ಆದರೆ ಈ ಗೋಲು ಹೊಡೆಯುವ ಮುನ್ನ ನಾರ್ವೆಯ ಗೋಲ್‌ಕೀಪರ್ ಓರ್ಜಾನ್ ನೈಲ್ಯಾಂಡ್ ಅವರು ಒದ್ದ ಚೆಂಡು ಮೈದಾನದ ಮೇಲಿದ್ದ ಸ್ಟೇಡಿಯಂನ ಕ್ಯಾಮೆರಾ ಕೇಬಲ್‌ಗೆ (Camera Cable) ತಗುಲಿತ್ತು ಎಂದು ನಾರ್ವೆ ಆಟಗಾರರು ವಾದಿಸುತ್ತಿದ್ದಾರೆ.
For the benefit of those who haven’t seen the review of the ball hitting the camera cable before England’s equaliser on Fox Sports… pic.twitter.com/TQks5POkLe
— Melissa Reddy (@MelissaReddy_) July 11, 2026
ಕೇಬಲ್‌ಗೆ ತಗುಲಿ ದಿಕ್ಕು ಬದಲಾಯಿಸಿದ ಚೆಂಡು ನೇರವಾಗಿ ಇಂಗ್ಲೆಂಡ್‌ನ ಎಲಿಯಟ್ ಆಂಡರ್ಸನ್ ಕಾಲಿಗೆ ಬಿತ್ತು. ಅಲ್ಲಿಂದ ಆಂಥೋನಿ ಗಾರ್ಡನ್ ಮೂಲಕ ಪಾಸ್ ಪಡೆದ ಬೆಲ್ಲಿಂಗ್‌ಹ್ಯಾಂ ಗೋಲು ಬಾರಿಸಿದರು. ಚೆಂಡು ಕೇಬಲ್‌ಗೆ ತಗುಲಿದ ತಕ್ಷಣವೇ ನಾರ್ವೆ ಆಟಗಾರರು ರೆಫ್ರಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರಾದರೂ ರೆಫ್ರಿ ಅದನ್ನು ಪರಿಗಣಿಸದೆ ಗೋಲು ನೀಡಿದರು.
ನಿಯಮ ಏನು ಹೇಳುತ್ತದೆ?
ಫಿಫಾ ನಿಯಮಗಳ ಪ್ರಕಾರ ಪಂದ್ಯದ ವೇಳೆ ಚೆಂಡು ಮೈದಾನದ ಮೇಲಿರುವ ಯಾವುದೇ ಕ್ಯಾಮೆರಾ ಅಥವಾ ಕೇಬಲ್‌ಗೆ ತಗುಲಿದರೆ ತಕ್ಷಣ ಆಟವನ್ನು ನಿಲ್ಲಿಸಬೇಕು ಮತ್ತು ಡ್ರಾಪ್ ಬಾಲ್ (Drop Ball) ಮೂಲಕ ಆಟವನ್ನು ಮತ್ತೆ ಆರಂಭಿಸಬೇಕು. ಆದರೆ ಈ ಪಂದ್ಯದಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫ್ರಿ (VAR) ಕೂಡ ಹಸ್ತಕ್ಷೇಪ ಮಾಡದಿರುವುದು ನಾರ್ವೆ ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾರ್ವೆ ತಂಡವನ್ನು ಹಗಲು ದರೋಡೆ ಮಾಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
Ståle Solbakken on the ball striking the Spidercam camera during Norway vs England. 🎙️
A #WorldCup quarterfinal with no shortage of drama. pic.twitter.com/6z2zf5AAOm
— DAZN Football (@DAZNFootball) July 12, 2026
ಗೋಲು ರದ್ದು
ನಾರ್ವೆ ತಂಡದ ಬೇಸರ ಇಷ್ಟಕ್ಕೇ ಮುಗಿಯಲಿಲ್ಲ. ದ್ವಿತೀಯಾರ್ಧದಲ್ಲಿ ನಾರ್ವೆಯ ಟಾರ್ಬ್‌ಜಾರ್ನ್ ಹೆಗ್ಗೆಮ್ ಅವರು ಇಂಗ್ಲೆಂಡ್ ವಿರುದ್ಧ ಮತ್ತೊಂದು ಗೋಲು ಬಾರಿಸಿ ಸಂಭ್ರಮಿಸಿದ್ದರು. ಆದರೆ ಈ ಬಾರಿ ತಕ್ಷಣವೇ ಮಧ್ಯಪ್ರವೇಶಿಸಿದ VAR ಗೋಲು ಮೂಡುವ ಮುನ್ನ ನಾರ್ವೆಯ ಸ್ಟಾರ್ ಸ್ಟ್ರೈಕರ್ ಎರ್ಲಿಂಗ್ ಹಾಲಂಡ್(Erling Haaland) ಅವರು ಇಂಗ್ಲೆಂಡ್ ಆಟಗಾರನನ್ನು ತಳ್ಳಿದ್ದಾರೆ ಎಂದು ತೀರ್ಪು ನೀಡಿ ಆ ಗೋಲನ್ನು ರದ್ದುಗೊಳಿಸಿದ್ದರು. ಇದನ್ನೂ ಓದಿ: ಬೆಲ್ಲಿಂಗ್‌ಹ್ಯಾಂ ಮ್ಯಾಜಿಕ್, ಹಾಲಂಡ್ ಎಡವಟ್ಟು – ನಾರ್ವೆ ವಿರುದ್ಧ ಗೆದ್ದು ಸೆಮಿಗೆ ಇಂಗ್ಲೆಂಡ್ ಎಂಟ್ರಿ
ಫಿಫಾ ಸಮರ್ಥನೆ ಏನು?
ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಜೂಡ್ ಬೆಲ್ಲಿಂಗ್‌ಹ್ಯಾಂ ಬಾರಿಸಿದ ಸಮಬಲದ ಗೋಲಿನ ಬಿಲ್ಡ್-ಅಪ್ ವೇಳೆ ಚೆಂಡು ಸ್ಟೇಡಿಯಂನ ಓವರ್‌ಹೆಡ್ ಕ್ಯಾಮೆರಾ ಕೇಬಲ್‌ಗೆ ತಗುಲಿರಲಿಲ್ಲ ಎಂದು ಫಿಫಾ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟಪಡಿಸಿದೆ.
ವಿಶ್ವಕಪ್ ಪಂದ್ಯಗಳಲ್ಲಿ ಬಳಸಲಾಗುತ್ತಿರುವ ಅಧಿಕೃತ ಫುಟ್‌ಬಾಲ್‌ನೊಳಗೆ ಅತ್ಯಾಧುನಿಕ ಮೈಕ್ರೋಚಿಪ್ ಸೆನ್ಸರ್ ಅಳವಡಿಸಲಾಗಿರುತ್ತದೆ. ಚೆಂಡು ಗಾಳಿಯಲ್ಲಿದ್ದಾಗ ಯಾವುದೇ ವಸ್ತುವಿಗೆ ತಗುಲಿದರೆ ಈ ಸೆನ್ಸರ್ ತಕ್ಷಣವೇ ಡೇಟಾವನ್ನು ದಾಖಲಿಸುತ್ತದೆ.
Before England’s goal in minute 45+2 against Norway, the sensor in the Connected Ball showed no peak in the ‘heartbeat of the ball’ when in the air, and therefore no evidence that the ball touched the overhead wire and changed the movement of the ball. pic.twitter.com/gYf9ukfveT
— FIFA Media (@fifamedia) July 11, 2026
ಇಂಗ್ಲೆಂಡ್ ಗೋಲು ಗಳಿಸುವ ಮುನ್ನ ನಾರ್ವೆ ಕೀಪರ್ ಒದ್ದ ಚೆಂಡು ಗಾಳಿಯಲ್ಲಿದ್ದಾಗ ಅದರ ಗ್ರಾಫ್ ಅಥವಾ ‘ಹೃದಯ ಬಡಿತ’ದಲ್ಲಿ ಯಾವುದೇ ರೀತಿಯ ಹಠಾತ್ ಏರಿಳಿತ (Peak) ದಾಖಲಾಗಿಲ್ಲ. ತಾಂತ್ರಿಕ ವಿಶ್ಲೇಷಣೆಯ ಪ್ರಕಾರ ಚೆಂಡು ಯಾವುದೇ ಕೇಬಲ್ ಅಥವಾ ವೈರ್‌ಗೆ ತಗುಲಿ ತನ್ನ ದಿಕ್ಕನ್ನು ಬದಲಾಯಿಸಿದೆ ಎನ್ನಲು ಯಾವುದೇ ತಾಂತ್ರಿಕ ಪುರಾವೆಗಳಿಲ್ಲ ಎಂದು ಫಿಫಾ ಮೀಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟಿವಿ ರಿಪ್ಲೇಗಳಲ್ಲಿ ಚೆಂಡಿನ ಹಾದಿ ಬದಲಾದಂತೆ ಕಂಡರೂ ಅದು ಕೇವಲ ದೃಶ್ಯ ಭ್ರಮೆಯಾಗಿರಬಹುದು (Visual Illusion) ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಫಿಫಾ ತನ್ನ ಹೈಟೆಕ್ ಸೆನ್ಸರ್ ವರದಿಯನ್ನು ಮುಂದಿಟ್ಟು ಇಂಗ್ಲೆಂಡ್‌ಗೆ ಕ್ಲೀನ್ ಚಿಟ್ ನೀಡಿದೆ.
