LatestLeading NewsMain PostNational

ಕಿಂಗ್ಸ್‌ವೇಯಿಂದ ರಾಜ್‌ಪಥ್‌; ರಾಜ್‌ಪಥ್‌‌ನಿಂದ ಕರ್ತವ್ಯ ಪಥ್ – ಇಲ್ಲಿದೆ ದೆಹಲಿಯ ಐಕಾನಿಕ್ ರಸ್ತೆಯ ಇತಿಹಾಸ

-ಶಬ್ಬೀರ್‌ ನಿಡಗುಂದಿ, ವರದಿಗಾರರು, ನವದೆಹಲಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ಕೊಡುವ ಪ್ರವಾಸಿಗರು ಈ ರಸ್ತೆಯನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ಗೆ ಸಂಪರ್ಕಿಸುವ ಐಕಾನಿಕ್ ರಸ್ತೆ ರಾಜಪಥ್. ಪ್ರತಿ ವರ್ಷ ಗಣರಾಜೋತ್ಸವದ ಕೇಂದ್ರಬಿಂದುವಾಗುವ ಈ ಪ್ರಮುಖ ರಸ್ತೆಯ ಹೆಸರು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.

ಬುಧವಾರ ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂವನ್ನು (Central Vista Project) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಇದೇ ವೇಳೆ ರಾಜಪಥ್ ರಸ್ತೆಯ (Rajpath) ಹೆಸರನ್ನು ಕರ್ತವ್ಯ ಪಥ್ (Kartavya Path) ಎಂದು ಬದಲಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಈ ಮೂಲಕ ನೂರು ವರ್ಷಗಳ ಇತಿಹಾಸವಿರುವ ಈ ರಸ್ತೆಗೆ ಎರಡನೇ ಬಾರಿಗೆ ಮರು ನಾಮಕರಣವಾಗಲಿದೆ. ಇದನ್ನೂ ಓದಿ: ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

ಬ್ರಿಟಿಷರ ಆಳ್ವಿಕೆಯಲ್ಲಿ ಕಿಂಗ್ಸ್‌ವೇ ಎಂದು ಕರೆಯಲ್ಪಟ್ಟಿದ್ದ ಈ ರಸ್ತೆಯನ್ನು 1920 ರಲ್ಲಿ ನವದೆಹಲಿಯ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ನಿರ್ಮಿಸಿದರು. ರೈಸಿನಾ ಹಿಲ್‌ನಲ್ಲಿರುವ ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಮೂಲಕ ಸಾಗುವ ಈ ರಸ್ತೆಯ ಎರಡು ಬದಿಗಳಲ್ಲಿ ಬೃಹತ್ ಹುಲ್ಲುಹಾಸುಗಳು, ಕಾಲುವೆಗಳು ಮತ್ತು ಮರಗಳ ಸಾಲುಗಳಿಂದ ಕೂಡಿದೆ.

1911 ರಲ್ಲಿ ಬ್ರಿಟಿಷ್ ಸರ್ಕಾರವು ತಮ್ಮ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿತು. ಆಡಳಿತಾತ್ಮಕ ರಾಜಧಾನಿಯಾಗಿ ಕಾರ್ಯನಿರ್ವಹಿಸಲು ಹೊಸ ದೆಹಲಿಯನ್ನು ನಿರ್ಮಿಸಲು ಪ್ರಾರಂಭಿಸಿದರು. ಕೇಂದ್ರೀಕೃತ ಆಧುನಿಕ ಸಾಮ್ರಾಜ್ಯಶಾಹಿ ನಗರ ಪರಿಕಲ್ಪನೆಯಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಈ ರಸ್ತೆ ಲಂಡನ್‌ನಲ್ಲಿರುವ ಕಿಂಗ್ಸ್‌ವೇಗೆ ಹೋಲುತ್ತದೆ. ಐದನೇ ಜಾರ್ಜ್‌ರ ತಂದೆ ಏಳನೇ ಎಡ್ವರ್ಡ್‌ರ ಗೌರವಾರ್ಥವಾಗಿ ದೆಹಲಿಯಲ್ಲಿ ನಿರ್ಮಿಸಲಾದ ಅಪಧಮನಿಯ ರಸ್ತೆ ಇದಾಗಿದೆ.

ನಗರದ ವಿಹಂಗಮ ನೋಟವನ್ನು ನೀಡುತ್ತಿದ್ದ ಈ ರಸ್ತೆಗೆ 1911ರ ದರ್ಬಾರ್ ಸಮಯದಲ್ಲಿ ದೆಹಲಿಗೆ ಭೇಟಿ ನೀಡಿದ ಅಂದಿನ ಭಾರತದ ಚಕ್ರವರ್ತಿ ಐದನೇ ಜಾರ್ಜ್‌ರ ಗೌರವಾರ್ಥವಾಗಿ ರಸ್ತೆಗೆ ಕಿಂಗ್ಸ್‌ವೇ ಎಂದು ಹೆಸರಿಸಲಾಯಿತು. ಅವರು ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಔಪಚಾರಿಕವಾಗಿ ಇಲ್ಲಿ ಘೋಷಿಸಿದ್ದರು.

ಭಾರತದ ಸ್ವಾತಂತ್ರ್ಯದ ಬಳಿಕ ಇಂಗ್ಲಿಷ್‌ನ ಕಿಂಗ್ಸ್‌ವೇ ನಾ ಹಿಂದಿಯಲ್ಲಿ ರಾಜಪಥ್ ಎಂದು ಮರುನಾಮಕರಣ ಮಾಡಲಾಯ್ತು. ಕಳೆದ 75 ವರ್ಷಗಳಿಂದ ಈ ರಸ್ತೆ ಇದೇ ಹೆಸರಿನಿಂದ ಕರೆಸಿಕೊಳ್ಳುತ್ತಿದೆ‌. ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ‌ನಾ ಐಕಾನಿಕ್ ರಸ್ತೆಯೂ ಇದಾಗಿದೆ. ಇದನ್ನೂ ಓದಿ: RD Parade 2022: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ

ಫೆಬ್ರವರಿ 2021 ರಲ್ಲಿ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ನಿರ್ಮಾಣ ಕಾರ್ಯವು ಪ್ರಾರಂಭವಾಯಿತು. ಹೊಸ ಸಂಸತ್ತಿನ ಕಟ್ಟಡ ಮತ್ತು ಕೇಂದ್ರ ವಿಸ್ಟಾ ಅವೆನ್ಯೂವನ್ನು ಅದರ ಮೊದಲ ಹಂತವಾಗಿ ಮರು ಅಭಿವೃದ್ಧಿಗೊಳಿಸಲಾಯಿತು. ಈ ಕಾಮಗಾರಿ ಆರಂಭಕ್ಕೂ ಮುನ್ನ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು, ರಾಜಪಥ್ ದೆಹಲಿಯಲ್ಲಿ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ಸ್ಥಳ, ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಆದಾಗ್ಯೂ ಇಲ್ಲಿ ಶೌಚಾಲಯಗಳು ಸರಿಯಾಗಿಲ್ಲ, ಗೊತ್ತುಪಡಿಸಿದ ಮಾರಾಟ ವಲಯಗಳಿಲ್ಲ, ಪಾರ್ಕಿಂಗ್, ಸರಿಯಾದ ಬೆಳಕು, ಇತ್ಯಾದಿ ಸಾರ್ವಜನಿಕ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಹೇಳಿತ್ತು.

ಸೆಂಟ್ರಲ್ ವಿಸ್ಟಾದ ಭಾಗವಾಗಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಹಸಿರು ಹೊದಿಕೆಯನ್ನು 3.5 ಲಕ್ಷ ಚದರ ಮೀಟರ್‌ಗಳಿಂದ 3.9 ಲಕ್ಷ ಚದರ ಮೀಟರ್‌ಗಳಿಗೆ ಹೆಚ್ಚಿಸುವುದು ಮತ್ತು ಮಳೆ ನೀರು ಕೊಯ್ಲು ಜೊತೆಗೆ ಹೊಸ ನೀರಾವರಿ ವ್ಯವಸ್ಥೆಯನ್ನು ಒಳಗೊಂಡಿದೆ. ಒಳಚರಂಡಿ ಮರುಬಳಕೆ ಘಟಕ, ಸಾರ್ವಜನಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು, ಅವೆನ್ಯೂ ಉದ್ದಕ್ಕೂ 10 ಸ್ಥಳಗಳಲ್ಲಿ ಮಾರಾಟ ಪ್ರದೇಶವನ್ನು ನಿರ್ಮಿಸುವುದು, ಜೊತೆಗೆ ಕಾಲುವೆಗಳ ಮೇಲೆ ಸೇತುವೆ ನಿರ್ಮಿಸುವುದು ಈ ಅಭಿವೃದ್ಧಿಯ ಭಾಗವಾಗಿದೆ‌ ಎಂದು ಹೇಳಿತ್ತು. ಇದನ್ನೂ ಓದಿ: ಬಾಂಗ್ಲಾದೇಶ ಭಾರತದ ಅತಿದೊಡ್ಡ ಅಭಿವೃದ್ಧಿ, ವ್ಯಾಪಾರದ ಪಾಲುದಾರ: ಮೋದಿ

ಹೊಸ ಸಂಸತ್ ಕಟ್ಟಡದ ಜೊತೆಗೆ ಕೇಂದ್ರ ಸಚಿವಾಲಯ ಮತ್ತು ಹಲವಾರು ಇತರ ಸರ್ಕಾರಿ ಕಚೇರಿಗಳನ್ನು ಈ ಭಾಗದಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಸಾವಿರಾರು ನೌಕರರು ಈ ಭಾಗದಲ್ಲಿ ಇನ್ಮುಂದೆ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ದಾಸ್ಯದಿಂದ ಹೊರ ಬರುವ ಸಂಕಲ್ಪದ ಸೂಚಕವಾಗಿ ಈ ರಸ್ತೆಯ ಹೆಸರನ್ನು ರಾಜಪಥ್‌ನಿಂದ ಕರ್ತವ್ಯ ಪಥ್ ಆಗಿ ಮರು ನಾಮಕರಣ ಮಾಡಲಾಗುತ್ತಿದೆ.

Live Tv

Leave a Reply

Your email address will not be published.

Back to top button