– ಭಾರತದಲ್ಲಿ ಜನನ ಪ್ರಮಾಣ ದಾಖಲೆ ಕುಸಿತ
ಜಗತ್ತಿನಲ್ಲೇ 2ನೇ ಅತಿದೊಡ್ಡ ಜನಸಂಖ್ಯೆಯ ದೇಶವಾದ ಭಾರತದಲ್ಲೀಗ ಜನನ ಪ್ರಮಾಣ ದರ (India’s Fertility Rate) ಆತಂಕ ಮೂಡಿಸಿದೆ. ಭಾರತದ ಜನಸಂಖ್ಯೆ ವಿಚಾರವಾಗಿ ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಕೂಡ ತಲೆಕೆಡಿಸಿಕೊಂಡಿದ್ದಾರೆ. ದೇಶದ ಜನನ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತ ಕಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ, ಭಾರತದಲ್ಲಿ ಏನಾಗ್ತಿದೆ? ಜನನ ಪ್ರಮಾಣ ಕುಸಿತಕ್ಕೆ ಕಾರಣ ಏನು? ಮಸ್ಕ್ ಕಳವಳ ವ್ಯಕ್ತಪಡಿಸಿದ್ದೇಕೆ? ಮೊದಲಾದ ಪ್ರಶ್ನೆಗಳು ಮೂಡುವುದು ಸಹಜ. ಬನ್ನಿ ತಿಳಿಯೋಣ.
ಎಲಾನ್ ಮಸ್ಕ್ ಆತಂಕವೇನು?
ಭಾರತದ ಜನನ ಪ್ರಮಾಣ ಕಡಿಮೆಯಾಗಿದೆ. ಆ ಪ್ರಮಾಣವು ಸ್ಥಿರ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಅಗತ್ಯವೆಂದು ಪರಿಗಣಿಸಲಾದ ಮಟ್ಟಕ್ಕಿಂತ ಕುಸಿತ ಕಂಡಿದೆ. ವಿದ್ಯಾವಂತ ವರ್ಗದವರ ಪ್ರಮಾಣವು ಬಹಳ ಹಿಂದೆಯೇ ಈ ಮಟ್ಟಕ್ಕಿಂತ ಕಡಿಮೆಯಾಗಿತ್ತು ಎಂದು ಮಸ್ಕ್ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಸಂಸ್ಥೆ ಎಎಫ್ ಪೋಸ್ಟ್‌ನ ಡೇಟಾವನ್ನು ಉಲ್ಲೇಖಿಸಿ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಇದು ಭಾರತದ ಫಲವಂತಿಕೆ ದರದಲ್ಲಿ ಸ್ಥಿರ ಕುಸಿತವನ್ನು ಸೂಚಿಸುತ್ತದೆ. ಇದನ್ನೂ ಓದಿ: ಭಾರತದ ಜನಸಂಖ್ಯೆಯಲ್ಲಿ ಗಣನೀಯ ಕುಸಿತವಾಗುತ್ತಿದೆ – ಎಲಾನ್ ಮಸ್ಕ್ ಆತಂಕ
ಭಾರತದ ಜನಸಂಖ್ಯೆ
ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳ ನಂತರ 1950ರಲ್ಲಿ ಭಾರತದ ಜನಸಂಖ್ಯೆ ಸುಮಾರು 36 ಕೋಟಿ ಇತ್ತು. ಈಗ ದೇಶವು ಸುಮಾರು 145 ಕೋಟಿ ಜನಸಂಖ್ಯೆ ಹೊಂದಿದೆ. ಇದು ವಿಶ್ವದ ಜನಸಂಖ್ಯೆಯ 6ನೇ ಒಂದು ಭಾಗದಷ್ಟಿದೆ.

ಚೀನಾ ಮೀರಿಸಿದ ಭಾರತ
ಹಲವು ವರ್ಷಗಳಿಂದ ದೇಶದಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ಹಲವರು ಚಿಂತಿತರಾಗಿದ್ದರು. 2019 ರಲ್ಲಿ ಅಂತಹ ಸಾಧ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಎಚ್ಚರಿಸಿದ್ದರು. 2023 ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಯಿತು. ಆದಾಗ್ಯೂ, ಈಗ ಭಿನ್ನ ಸವಾಲನ್ನು ದೇಶ ಎದುರಿಸುತ್ತಿದೆ.
ಭಾರತದ ಫಲವಂತಿಕೆ ದರ ಏನು?
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವಿಶ್ವ ಜನಸಂಖ್ಯಾ ವರದಿ 2025 ರ ಪ್ರಕಾರ, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಒಟ್ಟು ಫಲವಂತಿಕೆ ದರ (TFR) ಗಮನಾರ್ಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೇವಲ ಒಂದು ದಶಕದಲ್ಲಿ ಈ ದರವು 2.3 ರಿಂದ 1.9ಕ್ಕೆ ಇಳಿದಿದೆ. ಇದು ಫಿನ್‌ಲೆಂಡ್‌ನಂತಹ ಅನೇಕ ಅಭಿವೃದ್ಧಿ ದೇಶಗಳಿಗಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಏನಿದು ಟಿಎಫ್‌ಆರ್?
ಜನಸಂಖ್ಯಾ ಬೆಳವಣಿಗೆಯಲ್ಲಿ ಪ್ರಮುಖವಾದ ಅಂಕಿ ಅಂಶಗಳಲ್ಲಿ ಒಟ್ಟು ಫಲವಂತಿಕೆ ದರ ಅಥವಾ ಟಿಎಫ್‌ಆರ್ ಕೂಡ ಒಂದು. ಇದು ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಹೆರುವ ಸರಾಸರಿ ಮಕ್ಕಳ ಸಂಖ್ಯೆಯಾಗಿದೆ. ಭಾರತದ ಈ ದರ ಪ್ರಸ್ತುತ 1.9ರಲ್ಲಿದೆ. 2.1 ಸಾಮಾನ್ಯ ಮಟ್ಟವಾಗಿದೆ. ಇದನ್ನೂ ಓದಿ: ಬ್ಲಡ್ ಕ್ಯಾನ್ಸರ್‌ಗಿಂತಲೂ ಡೇಂಜರಸ್ ಕ್ಯಾನ್ಸರ್‌ಗೆ ಸಿಕ್ಕಿದೆ ಹೊಸ ಔಷಧ – ಶೀಘ್ರವೇ ಭಾರತಕ್ಕೂ ಸಂಜೀವಿನಿ
1960 ರ ದಶಕದ ಆರಂಭದಲ್ಲಿ ಜಾಗತಿಕ ಸರಾಸರಿ 5.3 ರಷ್ಟಿದ್ದ ಟಿಎಫ್‌ಆರ್, 2024 ರಲ್ಲಿ 2.2 ರಷ್ಟಿತ್ತು. ಸಾಮಾನ್ಯ ದರಕ್ಕಿಂತ ಸ್ವಲ್ಪ ಹೆಚ್ಚು. ಅದೇ ಅವಧಿಯಲ್ಲಿ ಭಾರತದಲ್ಲಿ ಟಿಎಫ್‌ಆರ್ 5.9 ರಿಂದ 2 ಕ್ಕೆ ಇಳಿದಿದೆ. ಅಂದರೆ, ಸಾಮಾನ್ಯ ದರಕ್ಕಿಂತ ಸ್ವಲ್ಪ ಕಡಿಮೆ.
ಭಾರತೀಯರು ಕಡಿಮೆ ಮಕ್ಕಳನ್ನು ಹೊಂದಲು ಕಾರಣಗಳೇನು?
* ಆರ್ಥಿಕ ಸಮಸ್ಯೆ: 38%
* ವಸತಿ ಸಮಸ್ಯೆ: 22%
* ನಿರುದ್ಯೋಗ ಅಥವಾ ಕೆಲಸದ ಅಭದ್ರತೆ: 21%
* ಗುಣಮಟ್ಟದ ಶಿಶುಪಾಲನಾ ಆಯ್ಕೆಗಳ ಕೊರತೆ: 18%

ಆರೋಗ್ಯ ಸಂಬಂಧಿತ ಅಡೆತಡೆಗಳೇನು?
* ಅನಾರೋಗ್ಯ ಸಮಸ್ಯೆ ಅಥವಾ ದೀರ್ಘಕಾಲದ ಕಾಯಿಲೆಗಳು: 15%
* ಫಲವಂತಿಕೆ ಅಥವಾ ಗರ್ಭಧಾರಣೆಗೆ ಸಂಬಂಧಿಸಿದ ವೈದ್ಯಕೀಯ ಆರೈಕೆಗೆ ಅಡೆತಡೆಗಳು: 14%
* ಬಂಜೆತನ ಅಥವಾ ಗರ್ಭಧರಿಸುವ ತೊಂದರೆ: 13%
ಸಾಮಾಜಿಕ ಅಡೆತಡೆಗಳೇನು?
* ಸಂಗಾತಿ ಕಡಿಮೆ ಮಕ್ಕಳನ್ನು ಬಯಸುತ್ತಿದ್ದಾರೆ: 19%
* ಸೂಕ್ತ ಸಂಗಾತಿ ಸಿಗದಿರುವುದು: 14%
* ಮನೆಕೆಲಸ ಅಥವಾ ಶಿಶುಪಾಲನೆಯಲ್ಲಿ ಪಾಲುದಾರನ ಸಾಕಷ್ಟು ಒಳಗೊಳ್ಳುವಿಕೆ: 14%
ಗ್ರಾಮೀಣಕ್ಕಿಂತ ನಗರ ಭಾಗದಲ್ಲೇ ಕುಸಿತ!
SಖS ದತ್ತಾಂಶದ ಪ್ರಕಾರ, ನಗರಗಳಲ್ಲಿ ಫಲವಂತಿಕೆ ಬಹಳ ಕಡಿಮೆಯಾಗಿದೆ. ಇಲ್ಲಿನ ದರ 1.6 ಇದೆ. ಗ್ರಾಮೀಣ ಫಲವಂತಿಕೆ ದರ 2.1 ಆಸುಪಾಸಿನಲ್ಲಿದೆ. 2014 ರಲ್ಲಿ, ಭಾರತದ ಖಿಈಖ 2.3 ರಷ್ಟಿತ್ತು. ಗ್ರಾಮೀಣ ಭಾರತ 2.5 ಮತ್ತು ನಗರ ಭಾರತ 1.8 ರಷ್ಟಿತ್ತು.
ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ?
ರಾಜ್ಯಮಟ್ಟದ ದತ್ತಾಂಶ ನೋಡುವುದಾದರೆ, ಕೇರಳದ ಫಲವಂತಿಕೆ ದರ ಸುಮಾರು 1.7 ರಿಂದ 1.8 ರಷ್ಟಿದ್ದರೆ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳು 1.6 ರಿಂದ 1.7 ರ ವ್ಯಾಪ್ತಿಯಲ್ಲಿವೆ. ಜಪಾನ್, ಇಟಲಿ ಮತ್ತು ಜರ್ಮನಿಯಂತಹ ವಯಸ್ಸಾದವರೇ ಇರುವ ಮುಂದುವರಿದ ದೇಶಗಳಲ್ಲಿ ಕಂಡುಬರುವ ಪ್ರಮಾಣಕ್ಕೆ ಹತ್ತಿರದಲ್ಲಿದೆ. ಮತ್ತೊಂದೆಡೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಗಮನಾರ್ಹವಾಗಿ ಹೆಚ್ಚಿನ ಫಲವಂತಿಕೆ ದರಗಳನ್ನು ದಾಖಲಿಸಿವೆ. ಪ್ರಮುಖ ರಾಜ್ಯಗಳಲ್ಲಿ ಬಿಹಾರ 3.0, ಉತ್ತರ ಪ್ರದೇಶದಲ್ಲಿ 2.4 ರಷ್ಟಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು 2.0 ರಿಂದ 2.2 ರ ವ್ಯಾಪ್ತಿಯಲ್ಲಿವೆ. ಇದನ್ನೂ ಓದಿ: ಭಾರತದ ಇತಿಹಾಸದಲ್ಲೇ ದೀರ್ಘಕಾಲ ಪ್ರಧಾನಿಯಾಗಿ ಆಡಳಿತ – ನೆಹರೂ ದಾಖಲೆ ಮುರಿದ ಮೋದಿ
ಭಾರತದಲ್ಲಿ ಜನಸಂಖ್ಯೆ ಕುಸಿತ ಆಗುತ್ತಾ?
ಇಲ್ಲ. ಫಲವಂತಿಕೆ ಪ್ರಮಾಣ ಕುಸಿಯುತ್ತಿದ್ದರೂ, ಭಾರತದ ವಯಸ್ಕರು ಮತ್ತು ಯುವಸಮುದಾಯದ ಜನಸಂಖ್ಯೆಯಿಂದಾಗಿ ಮುಂದಿನ ಕೆಲವು ದಶಕಗಳ ವರೆಗೆ ಜನಸಂಖ್ಯೆಯು ಬೆಳೆಯುತ್ತದೆ.
ಹೆಚ್ಚು ಮಕ್ಕಳು ಹೊಂದಲು ಸರ್ಕಾರಗಳ ಪ್ರೋತ್ಸಾಹ ಹೇಗಿದೆ?
ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚು ಮಕ್ಕಳನ್ನು ಹೊಂದಲು ಸರ್ಕಾರಗಳು ಪ್ರೋತ್ಸಾಹ ಧನ ನೀಡುತ್ತಿವೆ. 3ನೇ ಮಗು ಹೊಂದುವ ದಂಪತಿಗೆ 30,000 ರೂ. ಆರ್ಥಿಕ ಪ್ರೋತ್ಸಾಹ, ಐವಿಎಫ್ ನೆರವು, ಮಕ್ಕಳನ್ನು ಪೋಷಿಸಲು ಕುಟುಂಬಗಳಿಗೆ ವಸತಿಗಾಗಿ 3 ಲಕ್ಷ ರೂ. ನೆರವು ಸೇರಿ ಹಲವು ಯೋಜನೆಗಳನ್ನು ಘೋಷಿಸುತ್ತಿವೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಣಕಾಸಿನ ನೆರವು ಘೋಷಿಸಿದ ಮೊದಲ ಭಾರತೀಯ ರಾಜ್ಯಗಳಲ್ಲಿ ಆಂಧ್ರಪ್ರದೇಶ ಒಂದಾಗಿದೆ.
