ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು ಪ್ರತಿಯೊಬ್ಬರೂ ಭಯಬೀತರಾಗುತ್ತಾರೆ. ಅಂತಹ ಮಾರಕ ಕಾಯಿಲೆಯಾಗಿದೆ. ಪ್ರತಿವರ್ಷ ಪ್ರಪಂಚದಲ್ಲಿ 1 ಕೋಟಿ ಜನರು ಹಾಗೂ ಭಾರತದಲ್ಲಿ 8.70 ಲಕ್ಷ ಜನ ವಿವಿಧ ರೀತಿಯ ಕ್ಯಾನ್ಸರ್‌ನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್‌ನಲ್ಲಿ (Cancer) ಹಲವಾರು ವಿಧಗಳಿವೆ. ಹೆಚ್ಚಿನ ಜನ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳೆಂದರೆ ರಕ್ತದ ಕ್ಯಾನ್ಸರ್, ಮೆದುಳಿನ ಗೆಡ್ಡೆ ಅಥವಾ ಶ್ವಾಸಕೋಶದ ಕ್ಯಾನ್ಸರ್ ಎಂದು ಭಾವಿಸುತ್ತಾರೆ. ಆದರೆ ಅದಕ್ಕಿಂತಲೂ ಅತ್ಯಂತ ಮಾರಕವೆಂದು ಪರಿಗಣಿಸಲಾಗುವ ಕ್ಯಾನ್ಸರ್ ಎಂದರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Deadliest Cancer). ಪ್ರತಿ ವರ್ಷ ಈ ಕ್ಯಾನ್ಸರ್‌ಗೆ ಭಾರತದಲ್ಲಿ 1 ಲಕ್ಷ ಜನ ಹಾಗೂ ಇಡೀ ವಿಶ್ವಾದ್ಯಂತ 4.70 ಲಕ್ಷ ಜನ ಸಾಯುತ್ತಿದ್ದಾರೆ. ಆದ್ರೆ ಕ್ಯಾನ್ಸರ್ ತಜ್ಞರು ಈ ಕಾಯಿಲೆ ಸಂಬಂಧಿತ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.
ಅತ್ಯಂತ ಮಾರಕವಾದ ಈ ಕ್ಯಾನ್ಸರ್‌ನಿಂದ ಪ್ರಾಣಾಪಾಯವಿದ್ದರೂ ಬದುಕುಳಿಯುವ ಸಮಯವನ್ನು ಹೆಚ್ಚಿಸುವ ಔಷಧವೊಂದನ್ನು (ಮಾತ್ರೆ ರೂಪದ ಔಷಧ) ಕ್ಯಾನ್ಸರ್ ರೋಗ ತಜ್ಞರು ಕಂಡುಹಿಡಿದಿದ್ದಾರೆ. ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಈ ಕುರಿತ ವರದಿಯ ಫಲಿತಾಂಶವನ್ನ ಪ್ರಸ್ತುತಪಡಿಸಿದ್ದಾರೆ. ʻಡರಾಕ್ಸೊನ್ರಾಸಿಬ್ʼ ಹೆಸರಿನ ಈ ಔಷಧವನ್ನು ಒಮ್ಮೆ ಮಾತ್ರ ಬಳಸಬಹುದಾಗಿದೆ. ಇದು ರೋಗಿಗಳ ಜೀವಿತಾವಧಿ ಸಮಯವನ್ನು ಹೆಚ್ಚಿಸುತ್ತದೆ ಎಂದು ASCO ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಔಷಧದ ಬಗ್ಗೆ ತಿಳಿಯುವ ಮುನ್ನ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಎಂದರೇನು? ಕ್ಯಾನ್ಸರ್ ನಿಂದ ಬದುಕುಳಿಯುವ ಸಾಧ್ಯತೆ ಎಷ್ಟು? ಯಾರಿಗೆ ಹೆಚ್ಚು ಅಪಾಯಕಾರಿ? ಅನ್ನೋದ್ರ ಬಗ್ಗೆ ತಿಳಿಯೋಣ….

ಏನಿದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್?
ಅತ್ಯಂತ ಅಪಾಯಕಾರಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್. ಇದನ್ನು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಇದರ ಆರಂಭಿಕ ಲಕ್ಷಣಗಳು ಕಾಣಿಸದಿರುವುದರಿಂದ ಇದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ, ರೋಗಿಯು ಹೊಟ್ಟೆ ನೋವು, ಅಜೀರ್ಣ ಅಥವಾ ಸೌಮ್ಯ ಆಯಾಸ ಅನುಭವಿಸುತ್ತಾನೆ. ಬಹುತೇಕರು ಇದನ್ನು ಸಾಮಾನ್ಯ ಹೊಟ್ಟೆ ಸಂಬಂಧಿತ ಸಮಸ್ಯೆ ಎನ್ನುತ್ತಾ ಕೆಲವೊಮ್ಮೆ ಕಡೆಗಣಿಸುತ್ತಾರೆ. ಇದಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನ ಕಡಿಮೆ ಇರೋದ್ರಿಂದ ಅಪಾಯಕಾರಿಯಾಗಿದೆ.
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬರುವ ಅಪಾಯ ಯಾರಿಗೆ ಇದೆ?
ಮಧುಮೇಹ ರೋಗಿಗಳು, ಧೂಮಪಾನಿಗಳು, ಕೊಬ್ಬಿನಂಶವಿರುವ ಆಹಾರ ಸೇವಿಸುವವರು, ಕುಟುಂಬದ ಇತಿಹಾಸದಲ್ಲಿ ಕ್ಯಾನ್ಸರ್ ಇರುವವರು, ಬೊಜ್ಜು ಮತ್ತು ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವವರಲ್ಲಿ ಈ ಕಾಯಿಲೆಯ ಅಪಾಯ ಹೆಚ್ಚಾಗಿರುತ್ತದೆ.
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣಗಳೇನು?
* ಹೊಟ್ಟೆಯ ಮೇಲ್ಭಾಗದಲ್ಲಿ ನಿರಂತರ ನೋವು
* ಹಸಿವಿನ ಕೊರತೆ ಮತ್ತು ಹಠಾತ್ ತೂಕ ನಷ್ಟ.
* ಕಾಮಾಲೆ
* ಸೌಮ್ಯ ಜ್ವರ ಅಥವಾ ಆಯಾಸ
* ಹಸಿವಾದರೂ ತಿನ್ನಲು ಮನಸ್ಸಾಗದಿರುವುದು
* ಗಾಢವಾದ ಮೂತ್ರ ಮತ್ತು ತಿಳಿ ಬಣ್ಣದ ಮಲ

ಬದುಕುಳಿಯುವ ಸಾಧ್ಯತೆ ಎಷ್ಟು?
ಈ ಕ್ಯಾನ್ಸರ್ ಬಹಳ ತಡವಾಗಿ ಪತ್ತೆಯಾಗುತ್ತದೆ. ಕ್ಯಾನ್ಸರ್ ಪತ್ತೆಯಾಗುವ ಹೊತ್ತಿಗೆ, ಅದು ಈಗಾಗಲೇ 3 ಅಥವಾ 4 ನೇ ಹಂತವನ್ನು ತಲುಪಿರುತ್ತದೆ. ಇದು ದೇಹದ ಇತರ ಭಾಗಗಳಿಗೆ, ವಿಶೇಷವಾಗಿ ಯಕೃತ್ತು, ಶ್ವಾಸಕೋಶಗಳು ಮತ್ತು ಹೊಟ್ಟೆಯ ಸುತ್ತಲೂ ಬಹಳ ವೇಗವಾಗಿ ಹರಡುತ್ತದೆ. ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ, ಬದುಕುಳಿಯುವ ಸಾಧ್ಯತೆ ಕೇವಲ 5 ವರ್ಷಗಳು ಎಂದು ಕ್ಯಾನ್ಸರ್ ನಿಯಂತ್ರಕ ರೋಗತಜ್ಞರು ಹೇಳುತ್ತಾರೆ.
ಜೀವಿತಾವಧಿ ಹೆಚ್ಚಿಸುವ ಸಂಜೀವಿನಿ ಸಿಕ್ಕಿತೇ?
ಪ್ರಸ್ತುತ ಪ್ರಸ್ತಾಪಿಸಲಾದ ʻಡರಾಕ್ಸೊನ್ರಾಸಿಬ್ʼ ಔಷಧವು ಮೇದೋಜ್ಜೀರಕ ಗ್ರಂಥಿಯ ಗೆಡ್ಡೆಗಳಲ್ಲಿ ಕಂಡುಬರುವ, ಕ್ಯಾನ್ಸರ್ ಪ್ರೇರೇಪಿಸುವ ಜೀನ್ ರೂಪಾಂತರವಾದ KRAS ಅನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿಯು (Pancreas) ಹೊಟ್ಟೆಯ ಹಿಂಭಾಗದಲ್ಲಿರುವ ಪ್ರಮುಖ ಅಂಗವಾಗಿದೆ. ಇದು ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳನ್ನು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಹಾರ್ಮೋನುಗಳನ್ನು (ಇನ್ಸುಲಿನ್ ಸೇರಿದಂತೆ) ಉತ್ಪಾದಿಸುತ್ತದೆ. ದಶಕಗಳ ಕಾಲ ಪಟ್ಟ ಶ್ರಮಕ್ಕೆ ಆಂಕೊಲಾಜಿಸ್ಟ್‌ಗಳಿಗೆ ಈಗ ಸಂಜೀವಿನಿ ಸಿಕ್ಕಂತಾಗಿದೆ.

ಈ ಮೊದಲು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರೋಗಿಗಳ ಬದುಕುಳಿಯುವಿಕೆ ಸರಾಸರಿ 3 ತಿಂಗಳಿಂದ ಹೆಚ್ಚೆಂದ್ರೆ 1 ವರ್ಷದೊಳಗಿನಷ್ಟಿತ್ತು. ಆದ್ರೆ ಕಳೆದ 2 ದಶಕಗಳಲ್ಲಿ ಸಕ್ರೀಯ ಸಂಶೋಧನೆಯ ಹೊರತಾಗಿಯು ಬದುಕುಳಿವಿಕೆ ಪ್ರಮಾಣದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ ಎಂದು ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಜಿಐ ಕ್ಯಾನ್ಸರ್ ಮತ್ತು ಜೆರಿಯಾಟ್ರಿಕ್ ಆಂಕೊಲಾಜಿ ತಜ್ಞ ಪ್ರೊಫೆಸರ್ ಅನಂತ್ ರಾಮಸ್ವಾಮಿ ಹೇಳಿದ್ದಾರೆ. ಇದರ ಮಧ್ಯೆ ಈಗಾಗಲೇ ಚಿಕಿತ್ಸೆ ಪಡೆದ ರೋಗಿಗಳ ಜೀವಿತಾವಧಿ ಹೆಚ್ಚಿಸುವ ಮಾತ್ರೆ ಸಿಕ್ಕಿದೆ ಅನ್ನೋದು ಸಿಹಿಸುದ್ದಿಯಾಗಿದೆ. ಈ ಹೊಸ ವರ್ಗದ ಔಷಧ ಈಗ ಆರಂಭಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಇದರಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ʻಡರಾಕ್ಸೊನ್ರಾಸಿಬ್ʼ ಔಷಧ ಹೇಗೆ ಕೆಲಸ ಮಾಡುತ್ತೆ?
RAS ಎಂಬುದು ಮಾನವನ ದೇಹದಲ್ಲೇ ವ್ಯಕ್ತವಾಗುವ ಪ್ರೋಟೀನ್ ಆಗಿದೆ. RNA ಜೀನ್ ಕುಟುಂಬದಲ್ಲಿ ರೂಪಾಂತರಗಳು (ಕ್ಯಾನ್ಸರ್‌ಗೆ ಕಾರಣವಾಗುವ ಜೀನ್‌ನಲ್ಲಿನ ಹಾನಿಕಾರಕ ಬದಲಾವಣೆಗಳು) ಸರಿಸುಮಾರು 20% ಎಲ್ಲಾ ಕ್ಯಾನ್ಸರ್‌ಗಳ ಮೇಲೆ ಪರಿಣಾಮ ಬೀರುತ್ತದೆ. RNA ನಿಂದ KRNA ಜೀನ್ ರೂಪಾಂತರಗೊಂಡ ನಂತರ ದೇಹದ ಮೇಲೆ ಪರಿಣಾಮ ಭೀರುತ್ತದೆ. ಸಾಮಾನ್ಯ ಜೀವಕೋಶಗಳ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತದೆ. ಆ ಜೀವಕೋಶಗಳೇ ಕ್ಯಾನ್ಸರ್ ಗೆಡ್ಡೆಗಳಾಗಿ ಬದಲಾಗುತ್ತವೆ. ಆದ್ರೆ ʻಡರಾಕ್ಸೊನ್ರಾಸಿಬ್ʼ ಔಷಧವು ಈ ಜೀವಕೋಶದ ಸ್ಥಿತಿಯನ್ನು ನಿರ್ಬಂಧಿಸುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಎಲ್ಲಾ ಮಾರ್ಗಗಳನ್ನು ನಿಗ್ರಹಿಸುತ್ತದೆ. ಸದ್ಯ ʻಡರಾಕ್ಸೊನ್ರಾಸಿಬ್ʼ ಆರಂಭಿಕ ಹಂತದ ಔಧವಾಗಿದೆ. ಅದೇ ರೀತಿಯ ಇನ್ನಷ್ಟು ಔಷಧಗಳನ್ನು ಕಂಡುಹಿಡಿಯುವ ಪ್ರಯತ್ನಗಳು ದಶಕಗಳಿಂದ ನಡೆಯುತ್ತಿದ್ದು, ಅವು ಇನ್ನೂ ಕೆಲ ವರ್ಷಗಳಲ್ಲೇ ಬಳಕೆಗೆ ಬರಬಹುದು. ಈಗಾಗಲೇ ಪ್ರಯೋಗಿಸಲಾದ ಅನೇಕ ಔಷಧಗಳ ಪೈಕಿ ʻಡರಾಕ್ಸೊನ್ರಾಸಿಬ್ʼ ಯಶಸ್ವಿ ಫಲಿತಾಂಶ ಕಂಡ ಮೊದಲ ಔಷಧವಾಗಿದೆ.

ಡಾರಾಕ್ಸೊನ್ರಾಸಿಬ್ ಅಸ್ತಿತ್ವದಲ್ಲಿರುವ ಚಿಕಿತ್ಸೆಗಳಿಗಿಂತ ಹೇಗೆ ಭಿನ್ನ?
ʻಡಾರಾಕ್ಸೊನ್ರಾಸಿಬ್ʼ ಔಷಧವು ಕಿಮೊಥೆರಪಿಗಿಂತ ಕಡಿಮೆ ತೀವ್ರವಾದ ಅಡ್ಡಪರಿಣಾಮ ಉಂಟುಮಾಡುತ್ತದೆ ಎಂಬುದು ಸಂಶೋಧನೆಯ ಪ್ರಾಯೋಗಿಕ ಹಂತದಲ್ಲೇ ಕಂಡುಬಂದಿದೆ. ಇದು ಸದ್ಯ ಇನ್ನೂ ಬಳಕೆಗೆ ಬಂದಿಲ್ಲ, ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ಸಭೆಯಲ್ಲಿ ಮಾತ್ರವೇ ಪ್ರಸ್ತಾಪಿಸಲಾಗಿದೆ.
ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ಚರ್ಮದ ದದ್ದು, ಬಾಯಿಯ ಹುಣ್ಣುಗಳು, ವಾಂತಿ ಮತ್ತು ವಾಂತಿಯಂತಹ ಸಂವೇದನೆಗಳು, ಆಯಾಸ ಮತ್ತು ಹಿಮೋಗ್ಲೋಬಿನ್ ಮಟ್ಟದಲ್ಲಿನ ಕುಸಿತ ಇತ್ಯಾದಿ ಸೇರಿವೆ. ಆದ್ರೆ ʻಡಾರಾಕ್ಸೊನ್ರಾಸಿಬ್ʼ ಇಂತಹ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ಆದಾಗ್ಯೂ ಇದು ಹೊಸ ಔಷಧ ಆಗಿರೋದ್ರಿಂದ ವೈದ್ಯರು ನಿಧಾನವಾಗಿ ಬಳಲು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಡಾರಾಕ್ಸೊನ್ರಾಸಿಬ್ ಔಷಧ ಭಾರತದಲ್ಲಿ ಲಭ್ಯವಿದೆಯೇ?
ಸದ್ಯಕ್ಕೆ ʻಡಾರಾಕ್ಸೊನ್ರಾಸಿಬ್ʼ ಮಾತ್ರೆ ಭಾರತದಲ್ಲಿ ಲಭ್ಯವಿಲ್ಲ, ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ. ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳೊಂದಿಗೆ ಹಲವು ಕ್ಯಾನ್ಸರ್‌ಗಳಿಗೆ ರಾಮಬಾಣವಾಗುವ ಸಾಮರ್ಥ್ಯವೂ ಈ ಔಷಧಕ್ಕೆ ಇರೋದ್ರಿಂದ, ಹಲವು ರಾಷ್ಟ್ರಗಳು ಇದರತ್ತ ಆಸಕ್ತಿ ತೋರಿವೆ. ಇನ್ನಷ್ಟು ಕ್ಲಿನಿಕಲ್ ಹಂತದ ಪ್ರಯೋಗಗಳು ಬಾಕಿ ಇರೋದ್ರಿಂದ ಭಾರತಕ್ಕೆ ಔಷಧ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ.
ಒಟ್ಟಿನಲ್ಲಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದ್ದು, ಅದು ನಿಮಗಿದೆ ಅಂತ ಗೊತ್ತಾಗುವ ಮೊದಲೇ ಅಂದು 3-4 ನೇ ಹಂತಕ್ಕೆ ತಲುಪಿರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸೋದು ಬಹಳ ಮುಖ್ಯ. ದೇಹದಲ್ಲಾಗುವ ಯಾವುದೇ ಸಣ್ಣ ಬದಲಾವಣೆಯನ್ನೂ ಕಡೆಗಣಿಸುವ ತಪ್ಪು ಮಾಡಬಾರದು ಅನ್ನೋದೇ ಕಳಕಳಿ.
