ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ ‘ಬಾಹುಬಲಿ’ ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ‘#BaahubaliTheTorchbearer’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas), ಆ ದಿನಗಳಲ್ಲಿ ಇಡೀ ಚಿತ್ರತಂಡ ಮತ್ತು ನಿರ್ಮಾಪಕರು ಎದುರಿಸಿದ ಅತಿ ದೊಡ್ಡ ರಿಸ್ಕ್ ಹಾಗೂ ಕಠಿಣ ಜರ್ನಿಯನ್ನು ನೆನೆದು ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.
The true impact of a movie is not just measured by collections, but by the way it reaches people across the world ❤️🔥#Baahubali #Prabhas #PuriJagannadh #IndianCinema #TeluguCinema#BaahubaliTheTorchBearer pic.twitter.com/ZbZtq7EONa
— 😴 (@_my_name_is_007) June 26, 2026
ಬಾಹುಬಲಿ ಸಿನಿಮಾದ (Baahubali Cinema) ದಿನಗಳನ್ನು ಮೆಲುಕು ಹಾಕಿದ ಅವರು, ಆ ಇಡೀ ಪ್ರಯಾಣ ತಮಗೆ ಒಂದು ಭೀಕರ ಯುದ್ಧದಂತೆ ಭಾಸವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆಯಾದ ಮೊದಲ ದಿನ ಎದುರಾದ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಪ್ರಭಾಸ್, ಅಂದು ಚಿತ್ರದ ನಿರ್ಮಾಪಕರು ತಮ್ಮ ಇಡೀ ಜೀವನವನ್ನೇ ಪಣಕ್ಕಿಟ್ಟಿದ್ದರು ಎಂದು ಹೇಳಿದ್ದಾರೆ. ʻಒಂದೊಮ್ಮೆ ಅಂದು ಏನಾದರೂ ಹೆಚ್ಚುಕಮ್ಮಿ ಆಗಿ ಸಿನಿಮಾ ಸೋತಿದ್ದರೆ, ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಮತ್ತು ನಿರ್ದೇಶಕ ರಾಜಮೌಳಿ ಬೀದಿಗೆ ಬರಬೇಕಾಗುತ್ತಿತ್ತು. ಅವರ ಇಡೀ ಜೀವನವೇ ತಲೆಕೆಳಗಾಗುತ್ತಿತ್ತುʼ ಎಂದು ಹೇಳುವ ಮೂಲಕ, ಸಿನಿಮಾಕ್ಕಾಗಿ ಅವರು ತೆಗೆದುಕೊಂಡಿದ್ದ ಅತಿ ದೊಡ್ಡ ಸಾಹಸವನ್ನು ಪ್ರಭಾಸ್ ಸ್ಮರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜಪಾನ್ ದೇಶದ ಪ್ರೇಕ್ಷಕರು ತಮ್ಮ ಮೇಲೆ ತೋರಿಸಿದ ಅತಿ ಮೀರಿದ ಪ್ರೀತಿಯನ್ನು ಪ್ರಭಾಸ್ ಕೊಂಡಾಡಿದ್ದಾರೆ. ಜಪಾನ್ ಪ್ರೇಕ್ಷಕರು ತುಂಬಾ ಸ್ವೀಟ್ ಮತ್ತು ಹೃದಯವಂತರು ಎಂದು ಬಣ್ಣಿಸಿದ ಅವರು, ಅಲ್ಲಿನ ಪ್ರೇಕ್ಷಕರು ಬಾಹುಬಲಿ ಚಿತ್ರವನ್ನು ಬರಮಾಡಿಕೊಂಡ ರೀತಿ ಮತ್ತು ತಮಗೆ ನೀಡಿದ ಅದ್ಭುತ ಗೌರವದಿಂದಾಗಿ, ಜಪಾನ್ ದೇಶವು ಈಗ ತಮಗೆ ತಮ್ಮ 2ನೇ ಮನೆಯಂತೆ ಭಾಸವಾಗುತ್ತದೆ ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಕೊನೆಯದಾಗಿ, ಬಾಹುಬಲಿ ಚಿತ್ರದ ಜಾಗತಿಕ ಮಟ್ಟದ ಬೃಹತ್ ಯಶಸ್ಸಿನ ನಂತರ ತಾವು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆಯೂ ಪ್ರಭಾಸ್ ಮನಬಿಚ್ಚಿ ಮಾತನಾಡಿದ್ದಾರೆ. ಅಂತಹ ಹಿಮಾಲಯದಂಥ ಯಶಸ್ಸಿನ ಬಳಿಕ ಮುಂದೇನು ಮಾಡಬೇಕು, ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಮೂಡಿತ್ತು ಎಂದು ಒಪ್ಪಿಕೊಂಡಿದ್ದಾರೆ. ಬಾಹುಬಲಿ ಮುಗಿದ ನಂತರದ ದಿನಗಳು ತಮಗೆ ವಿಪರೀತ ಒತ್ತಡ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು ಎಂದು ಪ್ರಭಾಸ್ ತಮ್ಮ ಹಳೆಯ ದಿನಗಳ ಮಾನಸಿಕ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
