– ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಪ್ರಿಯಕರ ಸಜೀವ ದಹನ
– ಪ್ರೇಯಸಿ ಪವಾಡ ಸದೃಶ ಪಾರು..!
ಬೆಂಗಳೂರು/ತುಮಕೂರು: ಬೆಂಗಳೂರಿನಲ್ಲಿ (Bengaluru) ನಡೆದ ಸಿನಿಮೀಯ ಕಿಡ್ನಾಪ್ ಪ್ರಕರಣವೊಂದು ತುಮಕೂರಿನ ಶಿರಾ ಬಳಿ ಭೀಕರ ಕಾರ್ ಸ್ಫೋಟದಲ್ಲಿ ಅಂತ್ಯಗೊಂಡಿದೆ. ಸಜೀವ ದಹನವಾಗಬೇಕಿದ್ದ ಯುವತಿ ರಮ್ಯಾ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದು, ಅಪಹರಣಕಾರ ನಾಗೇಂದ್ರ ಮಾತ್ರ ಸ್ಫೋಟದಲ್ಲಿ ಸಜೀವ ದಹನವಾಗಿದ್ದಾನೆ.
ಈ ಘಟನೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮ್ಯಾ ಮತ್ತು ಅಂಕೋಲಾ ಮೂಲದ ನಾಗೇಂದ್ರ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮದುವೆಗೆ ರಮ್ಯಾ ಒಪ್ಪಿಗೆ ನೀಡದೆ ಸುಮ್ಮನಾಗಿದ್ದಳು ಎನ್ನಲಾಗಿದೆ.

6 ವರ್ಷಗಳ ಪ್ರೇಮ ದುರಂತ ಅಂತ್ಯ
ಮೃತ ನಾಗೇಂದ್ರ ಹಾಗೂ ರಮ್ಯಾ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಜಗಳವಾಗಿದೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಮಧ್ಯೆ ಮನಸ್ತಾಪವೂ ಉಂಟಾಗಿತ್ತು. ಜೊತೆಗೆ ನಾಗೇಂದ್ರ ಫೋನ್ ನಂಬರ್‌ನ ಕೂಡ ರಮ್ಯಾ ಬ್ಲಾಕ್ ಮಾಡಿದ್ದಳಂತೆ. ಇದೇ ವಿಚಾರವಾಗಿ ನಾಗೇಂದ್ರ ರಸ್ತೆಯುದ್ಧಕ್ಕೂ ಪ್ರೇಯಸಿ ಜೊತೆ ಜಗಳವಾಡಿಕೊಂಡೇ ಬಂದಿದ್ದಾನೆ.
ಇದೇ ವಿಚಾರಕ್ಕೆ ನಾಗೇಂದ್ರ, ಇಂದು ಆಸ್ಪತ್ರೆ ಬಳಿ ಬಂದು ರಮ್ಯಾಳನ್ನ ಬಲವಂತವಾಗಿ ಬಾಡಿಗೆ ಕಾರಿನಲ್ಲಿ ಅಪಹರಿಸಿದ್ದಾನೆ. ಈ ಬಗ್ಗೆ ರಮ್ಯಾ ಸ್ನೇಹಿತೆಯಿಂದ ಕಿಡ್ನಾಪ್ ಕೇಸ್ ಸಹ ದಾಖಲಾಗಿತ್ತು. ಅಪಹರಣಕ್ಕೆ ಮೊದಲೇ ನಾಗೇಂದ್ರ ಪೆಟ್ರೋಲ್ ಬಾಂಬ್ ತಯಾರಿಸಿಕೊಂಡು ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ನಾಗೇಂದ್ರ, ತುಮಕೂರು-ಶಿರಾ ರಸ್ತೆಯಲ್ಲಿ ಕಾರು ಚಲಿಸುವಾ `ನಿನ್ನನ್ನು ಸಾಯಿಸಿ ನಾನು ಸಾಯುತ್ತೇನೆ’ ಎಂದು ಹೆದರಿಸಿ, ಚಾಕುವಿನಿಂದ ರಮ್ಯಾ ತಲೆ ಹಾಗೂ ತೋಳಿಗೆ ಇರಿದಿದ್ದಾನೆ. ಇದರಿಂದ ಭಯಭೀತನಾದ ಕಾರು ಚಾಲಕ ವಾಹನ ನಿಲ್ಲಿಸಿ ಓಡಿಹೋಗಿದ್ದಾನೆ. ಇದೇ ವೇಳೆ, ನಾಗೇಂದ್ರ ತಾನೇ ಬಾಂಬ್ ಸ್ಫೋಟಿಸಿಕೊಂಡಿದ್ದಾನೆ.
ಅಚ್ಚರಿಕರ ರೀತಿಯಲ್ಲಿ ರಮ್ಯಾ ಕಾರಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
