ಬೆಂಗಳೂರು: ತಂದೆ-ತಾಯಿ ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ಪುಟ್ಟ ಕಂದನೊಬ್ಬ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮಡಿವಾಳ ಪೊಲೀಸ್ ಠಾಣಾ (Madiwala Police Station) ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ.

ಆಗಸ್ಟ್ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗು ಗ್ರಿಲ್ ಮೇಲೆ ಹತ್ತಿದ್ದು, ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಬಳಿಕ ಮಗು ಬೌನ್ಸ್ ಆಗಿ ಮತ್ತೆ ನೆಲಕ್ಕೆ ಅಪ್ಪಳಿಸಿದ್ದು, ಗಂಭೀರವಾಗಿ ಗಾಯಗೊಂಡಿದೆ. ಇದನ್ನೂ ಓದಿ: ಬೇಟೆಗಾರರ ಎನ್‌ಕೌಂಟರ್ ಕೇಸ್ | ಸಂಧಾನ ವಿಫಲ – ಮರಣೋತ್ತರ ಪರೀಕ್ಷೆಗೆ ಸಹಿ ಹಾಕದ ಕುಟುಂಬಸ್ಥರು

ಮಗು ಮಹಡಿಯಿಂದ ಕೆಳಗೆ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕಣ್ಣಾರೆ ಕಂಡ ಸ್ಥಳೀಯರು ಕ್ಷಣಮಾತ್ರವೂ ತಡಮಾಡದೆ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಬೈಕ್‌ನಲ್ಲೇ ಮಗುವನ್ನು ಕರೆದೊಯ್ದ ಸ್ಥಳೀಯರು, ತಕ್ಷಣ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು-ಬದುಕಿನ ನಡುವೆ ಪುಟ್ಟ ಕಂದ ಹೋರಾಟ ನಡೆಸುತ್ತಿದೆ. ಇದನ್ನೂ ಓದಿ: ಬೆಂಗಳೂರು ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ – ಕುಲಪತಿಗಳಿಂದ ಮಹತ್ವದ ನಿರ್ಧಾರ!
ಮಕ್ಕಳನ್ನು ಮನೆಯ ಮುಂದೆ ಆಟವಾಡಲು ಬಿಡುವಾಗ ಪೋಷಕರು ಎಚ್ಚರ ವಹಿಸಬೇಕೆಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಎಚ್ಚರಿಕೆಯಾಗಿದೆ.
