ಮೈಸೂರು: ಕಾವೇರಿ ವನ್ಯಧಾಮದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಬೇಟೆಗಾರರ ಎನ್‌ಕೌಂಟರ್ ಪ್ರಕರಣಕ್ಕೆ (Encounter Case) ಸಂಬಂಧಿಸಿದಂತೆ ಕುಟುಂಬಸ್ಥರ ಮನವೊಲಿಕೆಗೆ ಪೊಲೀಸರು (Police) ನಡೆಸಿದ ಸಂಧಾನ ವಿಫಲವಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಲು ಮೃತರ ಸಂಬಂಧಿಕರು ಸಹಿ ಹಾಕಿಲ್ಲ. ಆದ್ದರಿಂದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮೂವರ ಮೃತದೇಹಗಳು ಮೈಸೂರಿನ ಶವಾಗಾರದಲ್ಲೇ ಉಳಿದಿವೆ. ಇದನ್ನೂ ಓದಿ: ಮೂವರು ಬೇಟೆಗಾರರ ಎನ್‌ಕೌಂಟರ್ – ಶಾಗ್ಯ ಅರಣ್ಯದಲ್ಲಿ ಗುಂಡಿನ ಕಾಳಗ, ಸ್ಥಳೀಯರ ಆಕ್ರೋಶ
ಶನಿವಾರ (ಆ.15) ರಾತ್ರಿ 10 ಗಂಟೆ ಸುಮಾರಿಗೆ ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ ಸಂಬಂಧಿಕರು, ನಾವು ಮೃತದೇಹಗಳನ್ನು ನೋಡಲು ಬಂದಿದ್ದೇವೆ. ಯಾವುದೇ ಕಾರಣಕ್ಕೂ ಸಹಿ ಮಾಡಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದರಿಂದ ಮರಣೋತ್ತರ ಪರೀಕ್ಷೆಗೆ ಆಗಮಿಸಿದ ವೈದ್ಯರು, ತಹಸಿಲ್ದಾರ್ ಹಾಗೂ ಪೊಲೀಸರು ವಾಪಸ್ ಆಗಿದ್ದಾರೆ.
ನ್ಯಾಯ ಸಿಗುವವರೆಗೆ ನಾವು ಸಹಿ ಮಾಡಲ್ಲ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. ಬಳಿಕ ಇಂದು (ಆ.16) ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಿ ಅಧಿಕಾರಿಗಳು ತೆರಳಿದ್ದಾರೆ.
ಏನಿದು ಘಟನೆ?
ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ (Shanghya Forest Area) ಆ.15ರ ಮುಂಜಾನೆ ಬೇಟೆಗಾರರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಓರ್ವ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಒಂದು ನಾಡಬಂದೂಕು ಹಾಗೂ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ.
ಮೂವರು ಬೇಟೆಗಾರರ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಟೆಗಾರರನ್ನು ಮೊದಲು ಸೆರೆಹಿಡಿದು ಬಳಿಕ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಅರಣ್ಯ ಇಲಾಖೆ ನಿರಾಕರಿಸಿದ್ದು, ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲೇ ಸಾವು ಸಂಭವಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಕಳ್ಳಬೇಟೆಗಾರರಿಂದ ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿಯಿಂದ ದಾಳಿ: ಅರಣ್ಯ ಇಲಾಖೆ ಸ್ಪಷ್ಟನೆ ಏನು?
