– ಅರಣ್ಯ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲೇನಿದೆ?

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ಕೊನೆಗೂ ಪ್ರತಿಕ್ರಿಯೆ ನೀಡಿದೆ. ಕಳ್ಳಬೇಟೆಗಾರರಿಂದ ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ದಾಳಿ ನಡೆಸಿದ್ದಾರೆಂದು ಸ್ಪಷ್ಟನೆ ನೀಡಿದೆ.
ಪ್ರಕಟಣೆಯಲ್ಲೇನಿದೆ?
ಕಳ್ಳ ಬೇಟೆಗಾರರ ಅಕ್ರಮ ಅರಣ್ಯ ಪ್ರವೇಶದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇಲಾಖಾ ಸಿಬ್ಬಂದಿಯ ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಹೊಳೆಮುರಿದಟ್ಟಿ ಗಸ್ತಿನ ಗೋಮಡಿನ ಹಳ್ಳ ಹಾಗೂ ಸೀರನಮಡ ಬಳಿ ಕೆಲವರು ಟಾರ್ಚ್ ಹಿಡಿದು ಓಡಾಟದ ಬಗ್ಗೆ ಅರಣ್ಯ ಪಾಲಕರಿಗೆ ಮಾಹಿತಿ ಸಿಕ್ಕಿತು. ಕಲ್ಲುಬಂಡೆ ಪೊದೆಗಳ ಮರೆಯಲ್ಲಿ ಅವಿತಿದ್ದ ಬೇಟೆಗಾರರು ಏಕಾಏಕಿ ದಾಳಿ ನಡೆಸಿದರು. ಶರಣಾಗುವಂತೆ ಸಿಬ್ಬಂದಿಯಿಂದ ಮನವೊಲಿಸುವ ಪ್ರಯತ್ನ ನಡೆಯಿತು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿಯಿಂದ ದಾಳಿ ಕೂಡ ನಡೆಯಿತು. ಕಳ್ಳಬೇಟೆಗಾರರು ನರಳಾಡುತ್ತಿರುವ ಶಬ್ದ ಕೇಳಿ ಪರಿಶೀಲನೆ ಮಾಡಲಾಯಿತು. ಈ ವೇಳೆ, ಮೂವರು ನೋವಿನಿಂದ ಒದ್ದಾಟ, ಓರ್ವ ಓಡುವ ದೃಶ್ಯ ಕಂಡುಬಂದಿತು.
ಗುಂಡು ತಗುಲಿದ ಮೂವರನ್ನು ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಲಾಯಿತು. ಪರಿಶೀಲಿಸಿ ಮೂವರು ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢೀಕರಿಸಿದರು. ಘಟನಾ ಸ್ಥಳದಲ್ಲಿ ಎರಡು ನಾಡ ಬಂದೂಕು, ಎರಡು ಚೀಲ 20 ಕೆಜಿ ಪ್ರಾಣಿ ಮಾಂಸ, ಮೂರು ಚಾಕು, ಒಂದು ಮಚ್ಚು, ಮದ್ದಿನ ಪೌಡರ್, ತಲೆ ಬ್ಯಾಟರಿ, ನಾಡಬಂದೂಕಿನ 38 ಗುಂಡು ಪತ್ತೆಯಾಗಿವೆ. ಆಹಾರ ಪದಾರ್ಥಗಳು ಸಹ ಪತ್ತೆಯಾಗಿವೆ.
ವನ್ಯಜೀವಿ ಕಾಯ್ದೆ ಉಲ್ಲಂಘನೆ, ಅತಿಕ್ರಮ ಪ್ರವೇಶ ಮಾಡಿದ್ದರು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿಯಿಂದ ಗುಂಡಿನ ದಾಳಿ ನಡೆದಿದೆ ಎಂದು ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಂದ ಕೊನೆಗೂ ಪ್ರಕಟಣೆ ಬಿಡುಗಡೆ.

