ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯಲ್ಲಿ (Harangi Dam) ನೀರಿನ ಸಂಗ್ರಹ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7.5 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ 5.4 ಟಿಎಂಸಿಗೆ ಇಳಿಕೆಯಾಗಿದೆ. ಮತ್ತೊಂದೆಡೆ, ನದಿ ಹಾಗೂ ನಾಲೆಗಳಿಗೆ ನೀರು ಹರಿಸುವ ಪ್ರಮಾಣವನ್ನೂ 50 ಕ್ಯೂಸೆಕ್‌ಗೆ ಇಳಿಸಲಾಗಿದೆ. ಮಳೆ ಕೈಕೊಟ್ಟರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಎದುರಾಗುವ ಆತಂಕವೂ ವ್ಯಕ್ತವಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಭರ್ತಿಯಾಗಿದ್ದ ಇದೇ ಅಣೆಕಟ್ಟೆಯಲ್ಲಿ ಇದೀಗ ನೀರಿನ ಸಂಗ್ರಹ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸದ್ಯ ಹಾರಂಗಿ ಅಣೆಕಟ್ಟೆಯಲ್ಲಿ 5.4 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ, ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 7.5 ಟಿಎಂಸಿ ನೀರು ಸಂಗ್ರಹವಾಗಿತ್ತು. ಹಾರಂಗಿ ಅಣೆಕಟ್ಟೆಯ ಮೂಲ ಗರಿಷ್ಠ ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ. ಆದರೆ, ಅಣೆಕಟ್ಟೆಯ ಕೆಳಭಾಗದಲ್ಲಿ ಹೂಳು ತುಂಬಿರುವುದು ಸೇರಿದಂತೆ ಹಲವು ಕಾರಣಗಳಿಂದ ಪ್ರಸ್ತುತ ಗ್ರಾಸ್ ಕ್ಯಾಪ್ ಸುಮಾರು 6.2 ಟಿಎಂಸಿಯಷ್ಟಿದೆ. ಇದರಲ್ಲಿ ಈಗಾಗಲೇ 5.4 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಕೆಲವು ದಿನಗಳಿಂದ ಅಣೆಕಟ್ಟೆಯಿಂದ ನದಿ ಹಾಗೂ ಮುಖ್ಯ ನಾಲೆಗೆ ನೀರು ಹರಿಸುವ ಪ್ರಮಾಣವನ್ನೂ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಸೆಪ್ಟೆಂಬರ್ 20ರವರೆಗೆ ನದಿಗೆ 500 ಕ್ಯೂಸೆಕ್, ಮುಖ್ಯ ನಾಲೆಗೆ 1,100 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಆದರೆ, ಸೆಪ್ಟೆಂಬರ್ 23ರಿಂದ ನದಿ ಮತ್ತು ನಾಲೆ ಎರಡಕ್ಕೂ ಸೇರಿ ಕೇವಲ 50 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಈ ನಡುವೆ ಇದೀಗ ಹಾರಂಗಿ ಅಣ್ಣೆಕಟ್ಟು ಜಲಾಶಯವನ್ನೇ ಅವಲಂಬಿಸಿರುವ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ತಂದ ಫಜೀತಿ; 10-12 ಕಿಮೀ ದೂರಕ್ಕೆ 3 ಗಂಟೆ ಪ್ರಯಾಣ
ಆಗಸ್ಟ್ ತಿಂಗಳಲ್ಲಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಅಣೆಕಟ್ಟು ಭರ್ತಿಯಾಗಿತ್ತು. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿತ್ತು. ಇದರ ಜೊತೆಗೆ, ರಾಜ್ಯ ಸರ್ಕಾರದ ಸೂಚನೆಯಂತೆ ಕುಡಿಯುವ ನೀರಿಗಾಗಿ ಹಾಗೂ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ ಕಳೆದ 25 ದಿನಗಳಿಂದ ನೀರು ಹರಿಸಲಾಗುತ್ತಿತ್ತು. ಆದರೆ, ಇದೀಗ ನೀರು ಹರಿಸುವ ಪ್ರಮಾಣವನ್ನು ಕೇವಲ 50 ಕ್ಯೂಸೆಕ್‌ಗೆ ಇಳಿಸಿದ್ದರೂ ಅಣೆಕಟ್ಟೆಯಲ್ಲಿನ ಸಂಗ್ರಹ ಮಾತ್ರ ಕಡಿಮೆಯಾಗುತ್ತಲೇ ಇದೆ. ಕಾವೇರಿ ಹಾಗೂ ಹಾರಂಗಿ ನದಿಗಳಲ್ಲೂ ನೀರಿನ ಹರಿವು ಗಣನೀಯವಾಗಿ ಇಳಿಕೆಯಾಗಿದೆ. ನದಿಗಳಲ್ಲಿ ಬೇಸಿಗೆ ಕಾಲದಲ್ಲಿ ಕಂಡುಬರುವಂತಹ ಕಡಿಮೆ ನೀರಿನ ಮಟ್ಟದ ಸನ್ನಿವೇಶ ಈಗಲೇ ಕಾಣಿಸುತ್ತಿದೆ. ಹೀಗಾಗಿ, ಕುಶಾಲನಗರ, ಸೋಮವಾರಪೇಟೆ ತಾಲೂಕು ಹಾಸನ-ಮೈಸೂರು ಭಾಗದ ಜನರಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ಮನೆ ಮಾಡುತ್ತಿದೆ.

