– ಇಂದು ಮೊಹಮ್ಮದ್ ನಲಪಾಡ್ 2ನೇ ಮದುವೆ
ಕೊಡಗು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಂದು ಕೊಡಗಿಗೆ ಭೇಟಿ ನೀಡುತ್ತಿದ್ದು, ಭಾಗಮಂಡಲದ ಭಗಂಡೇಶ್ವರ ದೇವಾಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಲಿದ್ದಾರೆ.

ಕಾವೇರಿ ಕಾಲೇಜು ಮೈದಾನಕ್ಕೆ ಬಂದಿಳಿಯಲಿರುವ ಡಿಕೆಶಿ, ಭಗಂಡೇಶ್ವರ ದೇವಾಲಯ ಭೇಟಿ ಬಳಿಕ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಲಪಾಡ್ 2ನೇ ಮದುವೆ ಇಂದು
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ (Kodagu) ಇಂದು (ಆ.16) ನಡೆಯಲಿದೆ. ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್ ಕುಟುಂಬಸ್ಥರ ಒಡೆತನದ ಕೂರ್ಗ್ ವೈಲ್ಡರ್‌ನೆಟ್ ರೆಸಾರ್ಟ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ನಿಕಾಹ್ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳ ಮುಖ್ಯಮಂತ್ರಿ ಸತೀಶನ್, ನಟರಾದ ಸುದೀಪ್, ಯಶ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಮೊಹಮ್ಮದ್ ನಲಪಾಡ್ ಅವರು ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ. 2017ರಲ್ಲಿ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದ ಅವರು ಇದೀಗ ಎರಡನೇ ವಿವಾಹವಾಗುತ್ತಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್ ವಿವಾಹವಾಗಲಿದ್ದಾರೆ.

ಮುನೀರ್ ಅಹಮ್ಮದ್ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎ. ಹಸನಬ್ಬ ಅವರ ಸಹೋದರಿ ಪುತ್ರ. ಮುನೀರ್ ಅಹಮ್ಮದ್ ಮತ್ತು ಎನ್.ಎ. ಹ್ಯಾರಿಸ್ ಕಳೆದ 20 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಮಲಿಹಾ ಫಾತಿಮಾ ಕಾನೂನು ವ್ಯಾಸಂಗ ಮಾಡಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಈ ವಿವಾಹ ನಿಶ್ಚಯವಾಗಿದೆ.
ಎರಡೂ ಕುಟುಂಬಗಳ ಸದಸ್ಯರು ಹಾಗೂ ಕೆಲವೇ ಕೆಲವು ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರಿಗೆ ಆಹ್ವಾನ ನೀಡಲಾಗಿದೆ.
ಆಗಸ್ಟ್ 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ.
