ನವದೆಹಲಿ: ಹಲವು ವರ್ಷಗಳಿಂದ ವಿಳಂಬವಾಗಿರುವ ಭಾರತದ ಪ್ರಾಜೆಕ್ಟ್ 75(I) ಜಲಾಂತರ್ಗಾಮಿ ನೌಕೆ ಯೋಜನೆ ಮತ್ತೆ ಚುರುಕು ಪಡೆದುಕೊಂಡಿದೆ. ಈ ಪ್ರಸ್ತಾವನೆ ಶೀಘ್ರದಲ್ಲೇ ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯುರಿಟಿ (CCS) ಮುಂದೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಡಿ ಭಾರತೀಯ ನೌಕಾಪಡೆಗಾಗಿ 6 ಅತ್ಯಾಧುನಿಕ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗುತ್ತದೆ. ಯೋಜನೆಯ ಅಂದಾಜು ವೆಚ್ಚ ಸುಮಾರು 70,000 ಕೋಟಿ ರೂ. ಆಗಿದೆ. ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ಜರ್ಮನಿಯ ಥೈಸೆನ್‌ಕ್ರುಪ್ ಮೆರೈನ್ ಸಿಸ್ಟಮ್ಸ್ (TKMS) ಸಹಭಾಗಿತ್ವದಲ್ಲಿ ಈ ಜಲಾಂತರ್ಗಾಮಿಗಳನ್ನು ಬಹುತೇಕ ಭಾರತದಲ್ಲೇ ನಿರ್ಮಿಸುವ ಉದ್ದೇಶವಿದೆ.

ವಾಣಿಜ್ಯ ಷರತ್ತುಗಳು ಹಾಗೂ ತಾಂತ್ರಿಕ ಮಾನದಂಡಗಳ ವಿಚಾರದಲ್ಲಿ ಹಲವು ಬಾರಿ ಮಾತುಕತೆ ಸ್ಥಗಿತಗೊಂಡಿದ್ದರಿಂದ ಯೋಜನೆ ವರ್ಷಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ CCS ಅನುಮೋದನೆ ದೊರೆತರೆ ಒಪ್ಪಂದಕ್ಕೆ ಸಹಿ ಹಾಕಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ TKMS ತನ್ನ ನೆಲೆಯನ್ನು ವಿಸ್ತರಿಸುತ್ತಿದೆ
ಯೋಜನೆಗೆ ಅಂತಿಮ ಅನುಮೋದನೆ ಇನ್ನೂ ಸಿಗದಿದ್ದರೂ, ಜರ್ಮನಿಯ TKMS ಭಾರತದಲ್ಲಿ ತನ್ನ ಪಾಲುದಾರಿಕೆ ಜಾಲವನ್ನು ವಿಸ್ತರಿಸುವ ಕೆಲಸವನ್ನ ಈಗಾಗಲೇ ಆರಂಭಿಸಿದೆ. ಹೈದರಾಬಾದ್ ಮೂಲದ VEM Technologies ಜೊತೆ TKMS ಒಪ್ಪಂದ ಮಾಡಿಕೊಂಡಿದ್ದು, ಭಾರೀ ಗಾತ್ರದ ಟಾರ್ಪಿಡೊಗಳನ್ನ (ನೀರಿನೊಳಗೆ ಹಾರಿಸುವ ಮಿಸೈಲ್) ಅಭಿವೃದ್ಧಿಪಡಿಸುವುದು, ನಿರ್ಮಿಸುವುದು, ಏಕೀಕರಿಸುವುದು ಮತ್ತು ಭವಿಷ್ಯದಲ್ಲಿ ಅವುಗಳನ್ನ ಆಧುನೀಕರಿಸುವ ಗುರಿ ಹೊಂದಿದೆ.
TKMSನ ಅಂಗಸಂಸ್ಥೆಯಾದ ATLAS ELEKTRONIK ಕೂಡ ಈ ಸಹಕಾರದಲ್ಲಿ ಭಾಗಿಯಾಗಿದ್ದು, ಭಾರತದ ಪರವಾಗಿ VEM Technologies ಏಕೀಕರಣ ಮತ್ತು ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಲಿದೆ. ಈ ವ್ಯವಸ್ಥೆ ಬಳಿಕ ತಂತ್ರಜ್ಞಾನ ವರ್ಗಾವಣೆ ಮತ್ತು ‘ಮೇಕ್ ಇನ್ ಇಂಡಿಯಾ’ ಟಾರ್ಪಿಡೊ ಯೋಜನೆ ಒಳಗೊಂಡ ತಂಡದ ಒಪ್ಪಂದವಾಗಿ ವಿಸ್ತರಿಸಿದೆ.

ಇದಲ್ಲದೆ, ಮುಂಬೈ ಮೂಲದ CFF Fluid Control ಜೊತೆ ಜಲಾಂತರ್ಗಾಮಿ ವಿರೋಧಿ ಯುದ್ಧ ವ್ಯವಸ್ಥೆಗಳ ಕುರಿತು TKMS ಪಾಲುದಾರಿಕೆ ಮಾಡಿಕೊಂಡಿದೆ. ಭಾರತೀಯ ಸಂಸ್ಥೆಗಳು ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸೇರಿದಂತೆ ಇನ್ನಷ್ಟು ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಸಾಧ್ಯತೆಯನ್ನೂ TKMS ಪರಿಶೀಲಿಸುತ್ತಿದೆ.
ಏನಿದರ ಗುರಿ?
ಭಾರತಕ್ಕೆ ಈ ಯೋಜನೆ ಕೇವಲ 6 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುವುದಕ್ಕೆ ಸೀಮಿತವಾಗಿಲ್ಲ. ದೇಶೀಯವಾಗಿ ನಿರ್ಮಾಣ, ನಿರ್ವಹಣೆ, ಆಧುನೀಕರಣ ಹಾಗೂ ಭವಿಷ್ಯದಲ್ಲಿ ಸ್ವಂತ ವಿನ್ಯಾಸ ಸಾಮರ್ಥ್ಯ ಬೆಳೆಸಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿದೆ.
ಈ ಜಲಾಂತರ್ಗಾಮಿಗಳಲ್ಲಿ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (AIP) ವ್ಯವಸ್ಥೆ ಇರಲಿದ್ದು, ಸಾಮಾನ್ಯ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಗಳಿಗಿಂತ ಹೆಚ್ಚು ಸಮಯ ನೀರಿನ ಅಡಿಯಲ್ಲಿ ಉಳಿಯಲು ಇದು ನೆರವಾಗಲಿದೆ. ಅತ್ಯಾಧುನಿಕ ಸೆನ್ಸರ್‌ಗಳು, ಟಾರ್ಪಿಡೊಗಳು, ಕ್ಷಿಪಣಿಗಳು ಹಾಗೂ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನೂ ಇವು ಹೊಂದುವ ನಿರೀಕ್ಷೆಯಿದೆ.
ಹಳೆಯ ಜರ್ಮನ್ ಸಹಭಾಗಿತ್ವಕ್ಕೆ ಹೊಸ ರೂಪ
ಭಾರತೀಯ ನೌಕಾಪಡೆ ಹಲವು ದಶಕಗಳಿಂದ ಜರ್ಮನ್ ವಿನ್ಯಾಸದ ಟೈಪ್ 209/1500 ಶಿಶುಮಾರ್-ಕ್ಲಾಸ್ ಜಲಾಂತರ್ಗಾಮಿಗಳನ್ನ ಬಳಸುತ್ತಿದೆ. 1980ರ ದಶಕದಿಂದಲೇ ಅವುಗಳಲ್ಲಿ ಕೆಲವು ಜಲಾಂತರ್ಗಾಮಿಗಳನ್ನ MDL ನಲ್ಲಿ ನಿರ್ಮಿಸಲಾಗಿತ್ತು. ಹೀಗಾಗಿ TKMS ಮತ್ತು MDL ನಡುವಿನ ಹೊಸ ಸಹಭಾಗಿತ್ವವು ಹಳೆಯ ಸಂಬಂಧಕ್ಕೆ ಹೊಸ ರೂಪ ನೀಡಲಿದೆ. ಆದರೆ ಈ ಬಾರಿ ಭಾರತದಲ್ಲೇ ನಿರ್ಮಾಣ ಮಾಡುತ್ತಿರುವುದು, ನೈಜ ತಂತ್ರಜ್ಞಾನ ವರ್ಗಾವಣೆ ಹಾಗೂ ದೇಶೀಯ ನೀರೊಳಗಿನ ಯುದ್ಧ ಕೈಗಾರಿಕಾ ಸಾಮರ್ಥ್ಯವನ್ನ ಬೆಳೆಸುವುದರ ಮೇಲೆ ಇರಲಿದೆ.
