ಬೆಂಗಳೂರು: ವಿಧಾನಸೌಧದ (Vidhana Soudha) ಮುಂಭಾಗದಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ‘ಫ್ರೀಡಂ ಹಬ್ಬ’ (Freedom Habba) ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿತ್ತು. ಆ.15ರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ಮೈ ನವಿರೇಳಿಸುವ ಸಂಭ್ರಮದ ಕಾರ್ಯಕ್ರಮ ಶಕ್ತಿಸೌಧದಲ್ಲಿ ನಡೆಯಿತು.

ನಮ್ಮಊರು, ನಿಮ್ಮಊರು, ಎಲ್ಲರ ಬೆಂಗಳೂರು ಎಂಬ ಹೆಮ್ಮೆಯ ಥೀಮ್‌ನೊಂದಿಗೆ ಜರುಗಿದ ಈ ಮಹಾಸಂಭ್ರಮದಲ್ಲಿ, ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದರು. ಒಂದು ಅಂದಾಜಿನಂತೆ ಸುಮಾರು 28-30 ಸಾವಿರ ಜನ ಈ ಕಾರ್ಯಕ್ರಮ ಕಣ್ತುಂಬಿಕೊಂಡರು. ಮಕ್ಕಳಿಗಾಗಿ ಅನೇಕ ಸ್ಟಾಲ್ ಗಳನ್ನು , ಅನೇಕ ಆಟೋಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಲು ಕ್ಯೂ ಆರ್ ಕೋಡ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಇದನ್ನೂ ಓದಿ: ಬೇಟೆಗಾರರ ಎನ್‌ಕೌಂಟರ್ ಕೇಸ್ | ಸಂಧಾನ ವಿಫಲ – ಮರಣೋತ್ತರ ಪರೀಕ್ಷೆಗೆ ಸಹಿ ಹಾಕದ ಕುಟುಂಬಸ್ಥರು
ಪುಟ್ಟ ಕಂದಮ್ಮಗಳು ಹಾಗೂ ಯುವ ಪ್ರತಿಭೆಗಳು ತಮ್ಮ ಅದ್ಭುತ ಕಲಾ ಪ್ರದರ್ಶನದ ಮೂಲಕ ಸ್ವಾತಂತ್ರ‍್ಯ ಉತ್ಸವಕ್ಕೆ ಅಕ್ಷರಶಃ ರಂಗು ತುಂಬಿದರು. ಚಿಣ್ಣರ ನಗು ಹಾಗೂ ದೇಶಭಕ್ತಿಯ ನೃತ್ಯಗಳು ಮೈದಾನದಲ್ಲಿದ್ದ ಪ್ರತಿಯೊಬ್ಬರ ಕಣ್ಮನ ಸೆಳೆದವು.ಇನ್ನು ಅಂಬೇಡ್ಕರ್ ರಸ್ತೆಯಲ್ಲಿ ಕಂಗೊಳಿಸುವ ರಾಜ್ಯದ 15 ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳಿಂದ ಫ್ರೀಡಂ ಪರೇಡ್ ನಡೆಯಿತು. ಈ ಪರೇಡ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್ ,ಕೃಷ್ಣ ಭೈರೇಗೌಡ ಭಾಗಿಯಾಗಿದ್ದರು.
ಖ್ಯಾತ ಕಲಾವಿದರ ಮಧುರ ಕಂಠದಿಂದ ಹೊಮ್ಮಿದ ದೇಶಭಕ್ತಿ ಹಾಗೂ ಭಾವಪೂರ್ಣ ಗೀತೆಗಳು ಇಡೀ ವಿಧಾನಸೌಧದ ಆವರಣದಲ್ಲಿ ರೋಮಾಂಚನ ಲೋಕವನ್ನೇ ಸೃಷ್ಟಿಸಿದವು. ಎಂ.ಡಿ.ಪಲ್ಲವಿ, ರಘು ದೀಕ್ಷಿತ್, ಸಂಜಿತ್ ಹೆಗ್ಡೆ ಗಾಯನ ಪ್ರೇಕ್ಷಕರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿತ್ತು. ಇದನ್ನೂ ಓದಿ: ‘ಈಗ ತಗೊಳ್ಳಿ.. ಆಮೇಲೆ ಪಾವತಿಸಿ’ – ‘ಕ್ರೆಡಿಟ್’ ಸಿಸ್ಟಮ್ ಮೇಲೆ Gen Z ಅವಲಂಬನೆ; ಆರ್‌ಬಿಐಗೆ ತಲೆನೋವು!
