ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿಯಂದು ದೇವರ ನೈವೇದ್ಯಕ್ಕೆ ಒಂದೊಂದು ಕಡೆಗಳಲ್ಲಿ ಒಂದೊಂದು ಬಗೆಯ ಸಿಹಿ ತಿನಿಸು ಮಾಡುತ್ತಾರೆ. ಅರಿಶಿನ ಎಲೆಯ ವಿಶಿಷ್ಟ ಪರಿಮಳದಲ್ಲಿ ಹಬೆಯಲ್ಲಿ ಬೇಯಿಸುವ ಅರಿಶಿನ ಎಲೆ ಕಡುಬು ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸುಗಳಲ್ಲಿ ಒಂದು. ನಾಗರ ಪಂಚಮಿಯಲ್ಲಿ ಈ ತಿನಿಸನ್ನು ದೇವರಿಗೆ ನೈವೇದ್ಯವಾಗಿ ಇಡುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.


ಬೇಕಾಗುವ ಪದಾರ್ಥಗಳು:
ತಾಜಾ ಅರಿಶಿನ ಎಲೆಗಳು – 6ರಿಂದ 8
ಅಕ್ಕಿ – 2 ಕಪ್
ಉಪ್ಪು – 1 ಚಿಟಿಕೆ
ನೀರು – ಅಗತ್ಯವಿದ್ದಷ್ಟು
ತಾಜಾ ತೆಂಗಿನ ತುರಿ – ಕಾಲು ಕಪ್
ಬೆಲ್ಲ – ಕಾಲು ಕಪ್
ಏಲಕ್ಕಿ ಪುಡಿ – ಕಾಲು ಚಮಚ
ಎಳ್ಳು – 1 ಚಮಚ
ತುಪ್ಪ – 1 ಚಮಚ

ಮಾಡುವ ವಿಧಾನ:
*ಮೊದಲು ಅಕ್ಕಿಯನ್ನು 2-3 ಬಾರಿ ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
*ನಂತರ ನೀರನ್ನು ಸಂಪೂರ್ಣವಾಗಿ ಬಸಿದು, ಅಕ್ಕಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
*ಹಿಟ್ಟು ತುಂಬಾ ತೆಳುವಾಗಿರಬಾರದು. ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಾಗಿರುವಂತೆ ಇರಲಿ.
*ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಎಳ್ಳು ಹಾಕಿ ಸ್ವಲ್ಪ ಹುರಿಯಿರಿ.
*ನಂತರ ತೆಂಗಿನ ತುರಿ ಮತ್ತು ತುರಿದ ಬೆಲ್ಲವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಕಲಿಸುತ್ತಾ ಬೇಯಿಸಿ.
*ಬೆಲ್ಲ ಕರಗಿ ತೆಂಗಿನ ತುರಿಯೊಂದಿಗೆ ಚೆನ್ನಾಗಿ ಬೆರೆತ ನಂತರ ಏಲಕ್ಕಿ ಪುಡಿ ಸೇರಿಸಿ.
*ಮಿಶ್ರಣ ಸ್ವಲ್ಪ ಗಟ್ಟಿಯಾಗಿ, ನೀರಿನಂಶ ಕಡಿಮೆಯಾದಾಗ ಗ್ಯಾಸ್ ಆಫ್ ಮಾಡಿ. ಹೂರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
*ಈಗ ಅರಿಶಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಬಟ್ಟೆಯಿಂದ ನಿಧಾನವಾಗಿ ಒರೆಸಿ ನೀರಿಲ್ಲದಂತೆ ಮಾಡಿ.
*ನಂತರ ಒಂದು ಅರಿಶಿನ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿ ಹಿಟ್ಟನ್ನು ತೆಳುವಾಗಿ ಹಚ್ಚಿ.
*ಹಿಟ್ಟಿನ ಮಧ್ಯಭಾಗದಲ್ಲಿ ತಯಾರಿಸಿಟ್ಟಿರುವ ತೆಂಗಿನಕಾಯಿ-ಬೆಲ್ಲದ ಹೂರಣವನ್ನು ಹರಡಿ.
*ನಂತರ ಎಲೆಯನ್ನು ನಿಧಾನವಾಗಿ ಮಡಚಿ ಹೂರಣ ಹೊರಗೆ ಬರದಂತೆ ಮುಚ್ಚಿ. ಇದೇ ರೀತಿ ಉಳಿದ ಎಲೆಗಳಲ್ಲೂ ಕಡುಬು ತಯಾರಿಸಿಕೊಳ್ಳಿ.
*ಈಗ ಇಡ್ಲಿ ಪಾತ್ರೆ ಅಥವಾ ಸ್ಟೀಮರ್‌ನಲ್ಲಿ ನೀರು ಕುದಿಯಲು ಇಡಿ.
*ಕಡುಬುಗಳನ್ನು ಒಂದರ ಮೇಲೊಂದು ಒತ್ತಿಕೊಂಡಂತೆ ಇಡದೆ, ಸ್ವಲ್ಪ ಅಂತರವಿಟ್ಟು ಜೋಡಿಸಿ.
*ಮುಚ್ಚಳ ಹಾಕಿ 15-20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹಬೆಯಲ್ಲಿ ಬೇಯಿಸಿ.
*ಕಡುಬು ಬೇಯಿಸಿದ ನಂತರ ಎಲೆಯನ್ನು ನಿಧಾನವಾಗಿ ತೆರೆದು ನೋಡಿದಾಗ ಅಕ್ಕಿ ಹಿಟ್ಟು ಗಟ್ಟಿಯಾಗಿ ಬೇಯಿರಬೇಕು. ನಂತರ ಸ್ವಲ್ಪ ತಣ್ಣಗಾಗಲು ಬಿಡಿ.
*ಬಿಸಿ ಬಿಸಿಯಾದ ಅರಿಶಿನ ಎಲೆ ಕಡುಬನ್ನು ಎಲೆಯಿಂದ ತೆಗೆದು ಹಾಗೆಯೇ ತಿನ್ನಬಹುದು. ಮೇಲಿನಿಂದ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
