-ನೆರೆದಿದ್ದ ಜನರು ವಿಡಿಯೋ ಮಾಡುವುದನ್ನು ಬಿಟ್ಟು, ಸಹಾಯ ಮಾಡಿದ್ದರೆ ಮಗ ಬದುಕುಳಿಯುತ್ತಿದ್ದ
-2016ರಲ್ಲೇ ಕಟ್ಟಡ ತೆರವಿಗೆ ಆದೇಶಿಸಿದ್ದ ಸರ್ಕಾರ
ಲಕ್ನೋ: ಇಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸೋಮವಾರ (ಜೂ.23) ಬೆಂಕಿ ಹೊತ್ತಿಕೊಂಡು 15 ಜನ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಓರ್ವ ಯುವಕ ಪ್ರಾಣಬಿಡುವ ಮುನ್ನ ತಂದೆಗೆ ಕರೆ ಮಾಡಿ, ಅಪ್ಪ ಇಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಾಪಾಡು ಬಾ ಎಂದು ತಿಳಿಸಿರುವುದಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಪೋಷಕರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಸುಖಮಣಿ ಸಿಂಗ್ ಎಂಬಾತ ಮಧ್ಯಾಹ್ನ 2:15ರ ಸುಮಾರಿಗೆ ತಂದೆಗೆ ಕರೆ ಮಾಡಿ, ಅಪ್ಪ ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ನನ್ನನ್ನು ಕಾಪಾಡು ಬಾ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಆದರೆ ತಂದೆ ಪ್ರಭ್ಜೋತ್ ಸಿಂಗ್ ಅವರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಲಕ್ನೋ ಕೋಚಿಂಗ್ ಸೆಂಟರ್ ಅಗ್ನಿ ದುರಂತ; ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ
ಮೃತ ಆದಿತ್ಯನ ತಾಯಿ ಮಾತಾಡಿ, ಸುಮಾರು ಎರಡೂವರೆ ಗಂಟೆಗಳ ಕಾಲ ಕಟ್ಟಡದಲ್ಲಿ ಆವರಿಸಿದ್ದ ದಟ್ಟ ಹೊಗೆಯೊಳಗೆ ನನ್ನ ಮಗ ಸಿಲುಕಿಕೊಂಡಿದ್ದ. ಅಲ್ಲಿ ನೆರೆದಿದ್ದ ಜನರು ವಿಡಿಯೋ ಮಾಡುವುದನ್ನು ಬಿಟ್ಟು, ಸ್ವಲ್ಪ ಮುಂಚಿತವಾಗಿ ಸಹಾಯ ಮಾಡಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ. ಇನ್ನೂ ಮೃತ ಅಬ್ದುಲ್ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ತಂದೆಗೆ ಪಾರ್ಶ್ವವಾಯು ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕೇವಲ 8-10 ತಿಂಗಳ ಹಿಂದೆಯಷ್ಟೇ ಅಬ್ದುಲ್ ಕೆಲಸಕ್ಕೆ ಸೇರಿದ್ದ. ಸದ್ಯ ವಯಸ್ಸಾದ ಪೋಷಕರು ಒಂಟಿಯಾಗಿದ್ದಾರೆ.

ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಕೋಚಿಂಗ್ ಸೆಂಟರ್ ಇತ್ತು. ಅದೇ ಕಟ್ಟಡದ ನೆಲಮಹಡಿಯಲ್ಲಿ ಪ್ರಾಣಿಗಳ ಮಾರಾಟದ ಅಂಗಡಿಯಿತ್ತು. ಮೊದಲು ಅಲ್ಲಿ ಹೊತ್ತಿಕೊಂಡ ಬೆಂಕಿ ಬಳಿಕ ಉಳಿದ ಮಹಗಳಿಗೂ ಆವರಿಸಿದೆ. ಪರಿಣಾಮ 24 ಮಂದಿ ಗಾಯಗೊಂಡಿದ್ದು, ಆ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಲಕ್ನೋದ ಕೋಚಿಂಗ್ ಸೆಂಟರ್‌ನಲ್ಲಿ ಘನಘೋರ ಅಗ್ನಿ ದುರಂತ; 11 ಮಂದಿ ಸಜೀವ ದಹನ
ಘಟನೆಗೆ ಸಂಬಂಧಿಸಿದಂತೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು, ವಿದ್ಯುತ್ ಇಲಾಖೆಯ ಒಬ್ಬರು ಮತ್ತು ಅಗ್ನಿಶಾಮಕ ದಳದ ಒಬ್ಬರು ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಈ ಸಂಬಂಧ ಎಸ್‌ಐಟಿ ತನಿಖೆ ಆರಂಭಿಸಿದ್ದು, ಕಟ್ಟಡದ ಜಂಟಿ ಮಾಲೀಕರಾದ ರಾಮ್ ಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ, ತುಷಾರ್ ಕೃಷ್ಣ ಜೈಸ್ವಾಲ್ ಮತ್ತು ಸುರೇಶ್ ಕುಮಾರ್ ಸಾಹು ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

2016ರಲ್ಲೇ ಕಟ್ಟಡ ತೆರವಿಗೆ ಆದೇಶ:
ಈ ಜಾಗವನ್ನು ಮೊದಲು 1980ರಲ್ಲಿ ವಿಜಯ್ ಕುಮಾರ್ ಅವರಿಗೆ ನೀಡಲಾಗಿತ್ತು. 2005ರಲ್ಲಿ ಇದು ಅವರ ಮತ್ತು ಅವರ ಪತ್ನಿಯ ಹೆಸರಿಗೆ ನೋಂದಣಿಯಾಗಿತ್ತು. ನಂತರ, 2013ರಲ್ಲಿ ಅವರು ಇದನ್ನು ವೀರೇಂದ್ರ ಮತ್ತು ಸುರೇಂದ್ರ ಶುಕ್ಲಾ ಅವರಿಗೆ ಮಾರಾಟ ಮಾಡಿ, 2014ರಲ್ಲಿ ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು.
2014ರಲ್ಲಿ ಸುಮಾರು 1,992 ಚದರ ಅಡಿಯ ಈ ಕಟ್ಟಡಕ್ಕೆ ಮನೆ ಕಟ್ಟಲು ಸ್ವಯಂ ಪ್ರಮಾಣೀಕರಣ ಯೋಜನೆಯಡಿ ಅಧಿಕೃತ ಅನುಮೋದನೆ ಸಿಕ್ಕಿತ್ತು. 2016ರಲ್ಲಿ ಈ ಕಟ್ಟಡವು ಅನಧಿಕೃತ ನಿರ್ಮಾಣ ಎಂಬ ಆರೋಪ ಎದುರಿಸಿತ್ತು. ಇದರಿಂದಾಗಿ ಕಟ್ಟಡ ತೆರವಿಗೆ ಆದೇಶ ನೀಡಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಆದರೆ, ಕೇವಲ ಎರಡು ತಿಂಗಳ ಒಳಗೆ ಕಟ್ಟಡ ತೆರವಿಗಾಗಿ ನೀಡಿದ್ದ ಆದೇಶವನ್ನು ರದ್ದುಗೊಳಿಸಲಾಗಿತ್ತು.ಇದನ್ನೂ ಓದಿ: ಲಕ್ನೋದಲ್ಲಿ ಧಗಧಗನೆ ಹೊತ್ತಿ ಉರಿದ ಕೋಚಿಂಗ್ ಸೆಂಟರ್ – ಪಾರಾಗಲು ಕಟ್ಟಡದ ಮೇಲಿಂದ ಜಿಗಿದ ವಿದ್ಯಾರ್ಥಿಗಳು
