– ಹಾರ್ಮುಜ್ ದಾಟಲು 20% ಟೋಲ್ ವಿಧಿಸಿದ ಅಮೆರಿಕ
ವಾಷಿಂಗ್ಟನ್: ಅಮೆರಿಕ – ಇರಾನ್ (US – Iran) ನಡುವೆ ಮತ್ತೆ ಯುದ್ಧ ತೀವ್ರಗೊಂಡಿದೆ. ಈ ಮಧ್ಯೆ ಹಾರ್ಮುಜ್ ಜಲಸಂಧಿಯನ್ನ ಅಮೆರಿಕ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ, ಇರಾನ್ ಬಳಿ ಏನನ್ನೂ ಉಳಿಸಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತನಾಡಿರುವ ಅವರು, ಅಮೆರಿಕವು ʻಹಾರ್ಮುಜ್ ಜಲಸಂಧಿಯ ರಕ್ಷಕʼ ಆಗಲಿದೆ. ಇರಾನ್‌ಗೆ ದಿಗ್ಭಂದನ (IRANIAN BLOCKADE) ಇರಲಿದ್ದು, ಇತರ ಎಲ್ಲಾ ದೇಶಗಳಿಗೆ ನ್ಯಾಯಯುತ ಮತ್ತು ಮುಕ್ತ ಸಂಚಾರಕ್ಕೆ ಅವಕಾಶ ಇರಲಿದೆ. ಆದ್ರೆ ಪ್ರದೇಶದಲ್ಲಿ ಭದ್ರತೆ ಒದಗಿಸಲು ಜಲಮಾರ್ಗದ ಮೂಲಕ ಹಾದುಹೋಗುವ ಎಲ್ಲಾ ಸರಕುಗಳ ಮೇಲೆ ಶೇ.20 ರಷ್ಟು ಶುಲ್ಕ ವಿಧಿಸಲಾಗುವುದು ಎಂದಿದ್ದಾರೆ.

ಮುಂದುವರಿದು… ನಾವು ಜಲಸಂಧಿಯನ್ನು (Strait of Hormuz) ವಶಪಡಿಸಿಕೊಳ್ಳುತ್ತಿದ್ದೇವೆ. ನಾವು ಇರಾನಿಯನ್ನರಿಗೆ ಏನನ್ನೂ ಉಳಿಸುವುದಿಲ್ಲ. ಇರಾನ್‌ನಿಂದ ಬಂದ ಬೆದರಿಕೆಯನ್ನು ಅಮೆರಿಕ 47 ವರ್ಷಗಳ ಹಿಂದೆಯೇ ಪರಿಹರಿಸಬೇಕಿತ್ತು. ನಾನು ಈಗ ಆ ಕೆಲಸವನ್ನು ಮಾಡುತ್ತೇನೆ. ಇರಾನ್ ನಾಯಕರು ಅಮೆರಿಕದೊಂದಿಗೆ 11 ಗಂಟೆಗಳ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಷರತ್ತುಗಳಿಗೆ ಅವರು ಒಪ್ಪಿಕೊಂಡಿದ್ದರು. ಆದರೆ ಈಗ ಮಾತಿಗೆ ತಪ್ಪಿ ನಡೆಯುತ್ತಿದ್ದು, ಅಮೆರಿಕ ಅವರಿಗೆ ಭಾರೀ ಪೆಟ್ಟು ನೀಡಲಿದೆ. ಹಾರ್ಮುಜ್ ವಶಪಡಿಸಿಕೊಳ್ಳುವಿಕೆ ಅಂತಹ ಪೆಟ್ಟುಗಳಲ್ಲಿ ಒಂದು ಟ್ರಂಪ್ ಗುಡುಗಿದ್ದಾರೆ.
ನಾವು ಹಾರ್ಮುಜ್ ಜಲಸಂಧಿಯನ್ನು ವಶಪಡಿಕೊಳ್ಳುತ್ತೇವೆ. ಬಹುಶಃ ಅದು ನಮ್ಮ ನಿಯಂತ್ರಣದಲ್ಲಿ ಕಾರ್ಯಾಚರಣೆ ನಡೆಸಲಿದೆ. ನಾವು ಜಲಸಂಧಿಯ ರಕ್ಷಕರಾಗುತ್ತೇವೆ. ಬಹುಶಃ ನಾವು ಅದನ್ನು ಜಲಸಂಧಿಯ ರಕ್ಷಕ ದೇವತೆ ಎಂದು ಕರೆಯುತ್ತೇವೆ. ಹೀಗಾಗಿ ಹಾರ್ಮುಜ್ ಜಲಸಂಧಿ ದಾಟುವ ಯಾವುದೇ ತೈಲ ಟ್ಯಾಂಕರ್ ನಮಗೆ ಶುಲ್ಕ ಕಟ್ಟಬೇಕು ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಇಲ್ಲಿಯವರೆಗೆ ಅಮೆರಿಕವು ಜಲಸಂಧಿಯನ್ನು ಯಾವ ಆರ್ಥಿಕ ಉಪೇಕ್ಷೆ ಇಲ್ಲದೇ ಕಾಪಾಡುತ್ತಿತ್ತು. ಆದರೆ ಇನ್ನು ಮುಂದೆ ಶ್ರೀಮಂತ ರಾಷ್ಟ್ರಗಳು ಹಾರ್ಮುಜ್ ಬಳಕೆ ಮಾಡಲು ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ನಾವು ಜಾರಿಗೆ ತರುತ್ತೇವೆ. ನಮ್ಮ ಜನರನ್ನು ಅಪಾಯಕ್ಕೆ ಒಡ್ಡಿದಕ್ಕಾಗಿ ಆದ ವೆಚ್ಚವನ್ನು ಮರುಪಡೆಯಲು ನಾವು ನಿರ್ಧರಿಸಿದ್ದೇವೆ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
