– ಪುನರ್ವಸತಿ ಇಲ್ಲದೇ ತೆರವು ಕಾರ್ಯ ವಿರೋಧಿಸಿ ಯುವಕರ ಆಕ್ರೋಶ
ಕಠ್ಮಂಡು: ರಾಜಧಾನಿ ಕಠ್ಮಂಡುವಿನಲ್ಲಿ (Nepal Gen Z) ನೂರಾರು ಜನರು ಪ್ರತಿಭಟನೆ ನಡೆಸಿದ್ದು, ಪುನರ್ವಸತಿ ವ್ಯವಸ್ಥೆ ಮಾಡದೇ ಒತ್ತುವರಿದಾರರನ್ನು ತೆರವುಗೊಳಿಸುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ತಾವೇ ಆಯ್ಕೆ ಮಾಡಿ ಅಧಿಕಾರಕ್ಕೆ ತಂದ ನಾಯಕನ ವಿರುದ್ಧ ಈಗ ನೇಪಾಳದ Gen Zಗಳು ಬೀದಿಗಿಳಿದಿದ್ದಾರೆ. ಇದು ಪ್ರಧಾನಿ ಬಾಲೆನ್ ಶಾ ಸರ್ಕಾರ ಎದುರಿಸುತ್ತಿರುವ ಮೊದಲ ದೊಡ್ಡ ಸಾರ್ವಜನಿಕ ಪ್ರತಿಭಟನೆಯಾಗಿದೆ.
ಕಠ್ಮಂಡು ಮೆಟ್ರೋಪಾಲಿಟನ್ ಪೊಲೀಸರ ತೆರವು ಕಾರ್ಯಾಚರಣೆಯ ವಿರುದ್ಧ ಆರಂಭವಾದ ಪ್ರತಿಭಟನೆ, ಕೀರ್ತಿಪುರದ ಸರ್ಕಾರಿ ವಸತಿ ಕೇಂದ್ರದಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡ ಕುಟುಂಬಗಳ ಸಮಸ್ಯೆ ಬಳಿಕ ಮತ್ತಷ್ಟು ತೀವ್ರಗೊಂಡಿದೆ. ವಸತಿ ಕೇಂದ್ರದಲ್ಲಿನ ಪರಿಸ್ಥಿತಿ ಅಮಾನವೀಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನೆ ವೇಳೆ ಹಲವು Gen Z ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಶಿ ಪ್ರಾಂತ್ಯದಲ್ಲಿ ನಡೆದ ಪ್ರತಿಭಟನೆಯಲ್ಲೂ 26 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನೇಪಾಳಿ ಕಾಂಗ್ರೆಸ್ ನಾಯಕ ಗಗನ್ ಕುಮಾರ್ ಥಾಪಾ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಕಲಬುರಗಿಗೆ 24×7 ನೀರು ಯೋಜನೆ; ಜೂ. 2027ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಯತೀಂದ್ರ ಗಡುವು
ಈ ಪ್ರತಿಭಟನೆಗೆ ಮತ್ತಷ್ಟು ಕಿಡಿ ಹೊತ್ತಿಸಿದ್ದು 25 ವರ್ಷದ ರೈಡ್-ಶೇರಿಂಗ್ ಚಾಲಕ ಗಣೇಶ್ ನೇಪಾಳಿ ಆತ್ಮಹತ್ಯೆ ಪ್ರಕರಣ. ಪಾಸ್‌ಪೋರ್ಟ್ ಕಚೇರಿ ಬಳಿ ಪುರಸಭೆ ಪೊಲೀಸರು ಬೈಕ್‌ಗೆ ಲಾಕ್ ಹಾಕಿದ ಬಳಿಕ ಆತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬಳಿಕ ಸರ್ಕಾರ ಮತ್ತು ಪುರಸಭೆ ಪೊಲೀಸರ ವಿರುದ್ಧ ಜನರ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ.
ಏಪ್ರಿಲ್‌ನಲ್ಲಿ ಆರಂಭವಾದ ತೆರವು ಕಾರ್ಯಾಚರಣೆಯಲ್ಲಿ ಸುಮಾರು 2,600 ಕುಟುಂಬಗಳ 15 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ ಹಲವರಿಗೆ ಇನ್ನೂ ಶಾಶ್ವತ ಪುನರ್ವಸತಿ ಸಿಗದಿರುವುದೇ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ.
ಪ್ರತಿಭಟನಾಕಾರರು ಪ್ರಧಾನಿ ಬಾಲೆನ್ ಶಾ ರಾಜೀನಾಮೆ ನೀಡಬೇಕು, ಪುನರ್ವಸತಿ ವ್ಯವಸ್ಥೆ ಮಾಡಬೇಕು, ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಹಾಗೂ ಬಂಧಿತ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಪುರಸಭೆ ಪೊಲೀಸರಿಗೆ ಬಲಪ್ರಯೋಗ ಅಥವಾ ಬಂಧನ ಮಾಡುವ ಅಧಿಕಾರವೇ ಇಲ್ಲ ಎಂದು ಕಾನೂನು ತಜ್ಞರು ಪ್ರಶ್ನೆ ಎತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಠ್ಮಂಡುವಿನಲ್ಲಿ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದೆ. ಇದನ್ನೂ ಓದಿ: ಆ.6ರಿಂದ ಮುಂಗಾರು ಅಧಿವೇಶನ; ಮೂರ್ನಾಲ್ಕು ದಿನದಲ್ಲಿ ಹೈಕಮಾಂಡ್ ದೆಹಲಿಗೆ ಕರೆಯಬಹುದು: ಡಿಕೆಶಿ
