ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಸಂಸದ ಹಾಗೂ ನಾಯಕ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ಕಣ್ಣಿನ ಚಿಕಿತ್ಸೆಗಾಗಿ ಮೂರು ವಾರಗಳ ಕಾಲ ವಿದೇಶಕ್ಕೆ ಪ್ರಯಾಣಿಸಲು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಅನುಮತಿ ನೀಡಿದೆ.
ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲು ನಿರಾಕರಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ನೀಡಿದೆ.
ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ಮೂಲಕವೇ ವಿದೇಶಕ್ಕೆ ಪ್ರಯಾಣಿಸಬೇಕು ಎಂದು ಷರತ್ತು ವಿಧಿಸಿದೆ. ತಮ್ಮ ಪ್ರಯಾಣದ ವೇಳಾಪಟ್ಟಿ ಹಾಗೂ ತಂಗುವ ಸ್ಥಳದ ವಿವರಗಳನ್ನು ತನಿಖಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಕು. ಈ ವೇಳಾಪಟ್ಟಿಯನ್ನು ತನಿಖಾ ಸಂಸ್ಥೆಯು ರಹಸ್ಯವಾಗಿಡಬೇಕು ಹಾಗೂ ಬಹಿರಂಗಪಡಿಸಬಾರದು ಎಂದು ಪೀಠವು ನಿರ್ದೇಶಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್‌ವಿ ರಾಜು ಅವರು ವಿದೇಶ ಪ್ರಯಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಭಿಷೇಕ್ ವಿರುದ್ಧ 16 ಪ್ರಕರಣಗಳಿದ್ದು, ವಿದೇಶಕ್ಕೆ ತೆರಳಿದರೆ ಹಿಂತಿರುಗದಿರುವ ಸಾಧ್ಯತೆಯಿದೆ ಎಂದು ವಾದಿಸಿದರು. ಅಲ್ಲದೆ ವಿದೇಶಕ್ಕೆ ಹೋಗುವ ಅಗತ್ಯವಿದೆಯೇ ಎಂದು ಸರ್ಕಾರಿ ವೈದ್ಯಕೀಯ ಮಂಡಳಿಯಿಂದ ತಪಾಸಣೆ ನಡೆಸಬೇಕು ಎಂದು ಕೋರಿದರು. ಇದನ್ನೂ ಓದಿ: ಕರ್ನಾಟಕದಿಂದ 4.5 TMC ಕಾವೇರಿ ನೀರು ಬಿಡುಗಡೆಗೆ ಆಗ್ರಹ: ಗುರುವಾರ ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ
ಸರ್ಕಾರದ ಆಕ್ಷೇಪಕ್ಕೆ ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ, ಪ್ರತಿಯೊಬ್ಬ ವ್ಯಕ್ತಿಗೂ ವಿದೇಶಕ್ಕೆ ಹೋಗುವ ಮತ್ತು ತನಗೆ ಬೇಕಾದ ವೈದ್ಯಕೀಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಇದು ಕೇವಲ ಚುನಾವಣಾ ಭಾಷಣಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂಬುದನ್ನೂ ಪೀಠ ಉಲ್ಲೇಖಿಸಿತು.
ಅಭಿಷೇಕ್ ಬ್ಯಾನರ್ಜಿ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿ, ಅಭಿಷೇಕ್ ಅವರು ಲೋಕಸಭಾ ಸಂಸದರಾಗಿದ್ದು, ಪ್ರಮುಖ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರ ಕುಟುಂಬ ಇಲ್ಲೇ ಇದೆ, ಹಾಗಾಗಿ ತಲೆಮರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುವುದರಿಂದ ರಾಯಭಾರ ಕಚೇರಿಗಳು ಅವರ ಚಲನವಲನಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಒಳ ಉಡುಪನ್ನು ತೆಗೆದು ದರ್ಶನ್ ಹೊಡೆದಿದ್ದರು – ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?

