– ಅ. 3ರಿಂದ 6ರವರೆಗೆ ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ
ನವದೆಹಲಿ: ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ (Drought List) ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಆಗಮಿಸಲಿದೆ.
ಅಕ್ಟೋಬರ್ 3ರಿಂದ 6ರವರೆಗೆ ಕೇಂದ್ರ ತಂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಬರದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲಿದೆ.
ಒಟ್ಟು 10 ಸದಸ್ಯರನ್ನು ಒಳಗೊಂಡ ಕೇಂದ್ರ ತಂಡ ರಚಿಸಲಾಗಿದೆ. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಆಹಾರ ವಿತರಣೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಂಡದಲ್ಲಿದ್ದಾರೆ.
ಬರದಿಂದ ರೈತರಿಗೆ ಆಗಿರುವ ನಷ್ಟ ಎಷ್ಟು? ಯಾವ ಭಾಗದಲ್ಲಿ ಬೆಳೆ ಹಾನಿ ಹೆಚ್ಚು? ನೀರಿನ ಪರಿಸ್ಥಿತಿ ಹೇಗಿದೆ? ಸೇರಿದಂತೆ ಹಲವು ಅಂಶಗಳನ್ನು ತಂಡ ಪರಿಶೀಲಿಸಲಿದೆ. ಜಿಲ್ಲೆಗಳಿಗೆ ಭೇಟಿ ನೀಡುವ ವೇಳೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಮೂರು ತಂಡಗಳಿಂದ ಜಿಲ್ಲೆಗಳ ಪರಿಶೀಲನೆ
ಕೇಂದ್ರ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಿದೆ.
ಮೊದಲ ತಂಡ – ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಈ ಜಿಲ್ಲೆಗಳಲ್ಲಿ ಒಟ್ಟು 5,51,994 ಹೆಕ್ಟೇರ್ ಬೆಳೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಎರಡನೇ ತಂಡ – ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಪರಿಶೀಲಿಸಲಿದೆ. ಈ ಮೂರು ಜಿಲ್ಲೆಗಳಲ್ಲಿ 4,41,290 ಹೆಕ್ಟೇರ್ ಬೆಳೆ ಹಾನಿ ವರದಿಯಾಗಿದೆ. ಕೆಆರ್ಎಸ್ ಜಲಾಶಯದಲ್ಲಿನ ನೀರಿನ ಮಟ್ಟದ ಮಾಹಿತಿ ಪಡೆಯಲು ಮಂಡ್ಯ ಜಿಲ್ಲೆಯನ್ನು ಕೂಡ ಈ ತಂಡದ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: KPSC Scam | ಬಡ ಸ್ನೇಹಿತನಿಗೆ ಸೀಟ್ ಕೊಡಿಸಲು ಮತ್ತೊಬ್ಬನಿಂದ 30 ಲಕ್ಷ ಡೀಲ್; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಮೂರನೇ ತಂಡ – ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಈ ಜಿಲ್ಲೆಗಳಲ್ಲಿ 4,50,095 ಹೆಕ್ಟೇರ್ ಬೆಳೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಸಭೆ
ಜಿಲ್ಲೆಗಳ ಪ್ರವಾಸದ ಬಳಿಕ ಅಥವಾ ಪ್ರವಾಸದ ಭಾಗವಾಗಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸುವ ಸಭೆಯಲ್ಲೂ ಕೇಂದ್ರ ತಂಡ ಭಾಗಿಯಾಗಲಿದೆ. ಈ ವೇಳೆ ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ನೀರಿನ ಲಭ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ.ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ನಾಳೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು, ದರ್ಶನ್ಗೆ ಸಂಕಷ್ಟ!

