ಬೆಂಗಳೂರು: ʼಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲʼ ಎಂದು RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (B K Hariprasad), RSSಗೂ ಪಾಕಿಸ್ತಾನಕ್ಕೂ ಇರುವ ಲಿಂಕ್ ಬಗ್ಗೆ ತನಿಖೆಯಾಗಬೇಕು ಎಂದು ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧವೂ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮೋಹನ್ ಭಾಗವತ್ ಅವರು ಪಾಕಿಸ್ತಾನದ (Pakistan) ಕುರಿತು ಈ ರೀತಿಯ ಹೇಳಿಕೆ ನೀಡುತ್ತಿರುವುದು ಎರಡನೇ ಬಾರಿ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ʼಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲʼ ಎಂಬ ಹೇಳಿಕೆಯ ಹಿಂದೆ ಇರುವ ಉದ್ದೇಶವೇನು? RSSಗೂ ಪಾಕಿಸ್ತಾನಕ್ಕೂ ಯಾವುದೇ ಸಂಪರ್ಕವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಕಿಡಿಕಾರಿದ್ದಾರೆ.
ಪುಲ್ವಾಮಾ ದಾಳಿಯ ತನಿಖೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ತುಟಿ ಬಿಚ್ಚದಿರಲು ಕಾರಣ RSS ಎಂಬುದು ಈಗ ಬಟಾಬಯಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಹಿಂದೆ ಪಾಕಿಸ್ತಾನದ ISI ಹಾಗೂ ಉಗ್ರಗಾಮಿ ಸಂಘಟನೆಗಳೊಂದಿಗೆ RSS ಪ್ರಮುಖರು ರಹಸ್ಯ ಸಭೆಗಳನ್ನು ನಡೆಸಿದ್ದರು. ಈಗ ಮೋಹನ್ ಭಾಗವತ್ ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ ಎಂದು ಹೇಳುವ ಮೂಲಕ ಎಲ್ಲವೂ ಪೂರ್ವನಿಯೋಜಿತ ಎಂಬುದು ಬಯಲಾಗಿದೆ ಎಂದು ಹೇಳಿದರು.
2026ರ ಫೆಬ್ರವರಿ 6ರಂದು ಮೋದಿ ಸರ್ಕಾರದ ವಿದೇಶಾಂಗ ಸಚಿವಾಲಯವೇ ಸಂಸತ್ತಿಗೆ ನೀಡಿದ ಅಧಿಕೃತ ಉತ್ತರದಲ್ಲಿ ಪಾಕಿಸ್ತಾನವನ್ನು ಭಾರತದ ನೆರೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದೆ. ಹಾಗಿದ್ದರೆ, ವಿಧಾನ ಪರಿಷತ್ತಿನಲ್ಲಿ ನಾನು ಹೇಳಿದ ʼಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರʼ ಎಂಬ ಮಾತಿಗೆ ಗಟಾರದಲ್ಲಿ ಬಿದ್ದು ಹೊರಳಾಡಿದಂತೆ ನಟಿಸಿದ್ದ ನಕಲಿ ದೇಶಪ್ರೇಮಿಗಳು ಈಗ ಎಲ್ಲಿದ್ದಾರೆ? ಆಗ ನನ್ನ ಮೇಲೆ ಹರಿಹಾಯ್ದಿದ್ದ ಬಾಡಿಗೆ ದೇಶಭಕ್ತರ ನಾಲಿಗೆಗೆ ಈಗ ಬೀಗ ಬಿದ್ದಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಉಗ್ರ ಭಾಷಣಗಳನ್ನು ಮಾಡುವ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರ ಪಾಕಿಸ್ತಾನದ ಕುರಿತ ವರಸೆ ಈಗ ಬದಲಾಗಿದೆಯೇ? ಅಥವಾ ತಮ್ಮ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆಯನ್ನೇ ಮುಂದುವರಿಸುತ್ತಿದ್ದಾರೆಯೇ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಭಾರತವನ್ನು ವಿಭಜಿಸಿದ ಮಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಸೇರಿ ಬಂಗಾಳದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸರ್ಕಾರ ನಡೆಸಿದ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿಯಿಂದ ಹಿಡಿದು, ಜಿನ್ನಾ ಅವರ ಸಮಾಧಿಗೆ ಭೇಟಿ ನೀಡಿ ಅವರನ್ನು ʼಜಾತ್ಯತೀತ ನಾಯಕʼ ಎಂದು ಹೊಗಳಿದ ಅಡ್ವಾಣಿಯವರೆಗೆ, ಪಾಕಿಸ್ತಾನದ ಪ್ರಧಾನಿಯ ಮನೆಗೆ ಆಹ್ವಾನವಿಲ್ಲದಿದ್ದರೂ ಅಚ್ಚರಿಯ ರೀತಿಯಲ್ಲಿ ಬಿರಿಯಾನಿ ಸವಿದ ನರೇಂದ್ರ ಮೋದಿಯವರೆಗೆ ಬಿಜೆಪಿ ಹಾಗೂ ಅದರ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆ ಮುಂದುವರಿಯುತ್ತಲೇ ಇದೆ ಎಂಬ ಆರೋಪಗಳಿಗೆ ಈ ಬೆಳವಣಿಗೆಗಳು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಂಚಿಯಲ್ಲಿ ಉಗ್ರ ರೂಪ ಪಡೆದ JPSC-JSSC ಪ್ರತಿಭಟನೆ – ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್
ಒಂದು ಕಡೆ ಚುನಾವಣಾ ರಾಜಕಾರಣಕ್ಕಾಗಿ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಬಿಂಬಿಸುವುದು. ಮತ್ತೊಂದು ಕಡೆ ಅಧಿಕಾರದಲ್ಲಿರುವಾಗ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸುವುದು. ಇದು ಬಿಜೆಪಿ/ಆರ್‌ಎಸ್‌ಎಸ್‌ನ ದ್ವಂದ್ವ ನೀತಿಯಲ್ಲವೇ? ಗಡಿಯಲ್ಲಿ ನಮ್ಮ ವೀರ ಯೋಧರು ಪ್ರಾಣ ಕಳೆದುಕೊಳ್ಳುತ್ತಿರುವಾಗ, ಪುಲ್ವಾಮಾ ಮತ್ತು ಪಹಲ್ಗಾಮ್‌ನಂತಹ ಭೀಕರ ದಾಳಿಗಳಲ್ಲಿ ಅಮಾಯಕ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಬಲಿಯಾಗುತ್ತಿರುವಾಗ, ʼಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲʼ ಎಂದು ಹೇಳುವ ಮೋಹನ್ ಭಾಗವತ್ ಅವರ ಮಾತಿನ ಅರ್ಥವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಭಯವನ್ನು ಚುನಾವಣಾ ಭಾಷಣಗಳಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸುವ ಬಿಜೆಪಿ ನಾಯಕರು, ಈಗ ತಮ್ಮದೇ ಸರಸಂಘಚಾಲಕರ ಹೇಳಿಕೆಯ ಬಗ್ಗೆ ಮೌನವಾಗಿರುವುದೇಕೆ? ದೇಶಭಕ್ತಿಯ ಗುತ್ತಿಗೆ ಪಡೆದವರೇ, ನಿಮ್ಮ ವರಸೆ ಬದಲಾಗಿದೆಯೇ? ಅಥವಾ ನಾಗಪುರದಿಂದ ಬಂದ ಹೊಸ ನಿರ್ದೇಶನದ ನಿರೀಕ್ಷೆಯಲ್ಲಿದ್ದೀರಾ? ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ. ಇದನ್ನೂ ಓದಿ: JPSC ಪರೀಕ್ಷೆ ಅಕ್ರಮ | ಸಿಬಿಐ ತನಿಖೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ- ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಜಲಫಿರಂಗಿ ಬಳಕೆ

