-ಬಿಡದಿಯ ಕಿಂಚಿತ್ತೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ
-ಸಿಎಂ ಆಗಿ ಯಾರೇ ಒಳ್ಳೆಯ ಕೆಲಸ ಮಾಡಿದರೂ ಬೆಂಬಲಿಸುತ್ತೇವೆ
ರಾಮನಗರ: ರೈತರ ಹೊಟ್ಟೆ ಮೇಲೆ ಹೊಡೆದು ಬಿಡದಿ ಟೌನ್‌ಶಿಪ್ ಮಾಡಬೇಡಿ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಅವರು ರಾಜ್ಯ ಸರ್ಕಾರದ (Karnataka Govt) ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿಯ (Bidadi) ಬಿಜಿಎಸ್ ವೃತ್ತದಿಂದ ಆರಂಭವಾದ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಡದಿ ಭಾಗದಲ್ಲಿ ಯೋಜಿಸಲಾಗಿರುವ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಕಿಡಿಕಾರಿದರು. ಬಲವಂತದ ಭೂಸ್ವಾಧೀನ ಇಲ್ಲ ಎಂದು ಹೇಳುತ್ತಲೇ ದೆಹಲಿಗೆ ಹೋಗುವ ಮುನ್ನ 3 ಕೋಟಿ ನೀಡುತ್ತೇವೆ ಎಂದು ಬೆಲೆ ಹೆಚ್ಚಳ ಮಾಡಿ ಆಮಿಷವೊಡ್ಡುತ್ತಿದ್ದಾರೆ. 9,600 ಎಕರೆ ಭೂಮಿಯನ್ನು ಆಕ್ರಮಣ ಮಾಡಲು ಹೊರಟಿದ್ದು, ಬಡ ರೈತರ ಹೊಟ್ಟೆ ಮೇಲೆ ಹೊಡೆಯುವ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಕೈಮುಗಿದು ಮನವಿ ಮಾಡಿದರು. ಇದನ್ನೂ ಓದಿ: ಬಿಡದಿ ಪಾದಯಾತ್ರೆ ರಾಜಕೀಯ ಪಾದಯಾತ್ರೆ: ಮಧು ಬಂಗಾರಪ್ಪ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಡದಿ ರೈತರು ನಡೆಸುತ್ತಿರುವ ಹೋರಾಟವನ್ನು ಅಭಿನಂದಿಸಿ, ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರೂ ಕುಮಾರಸ್ವಾಮಿ ಅವರು ರೈತರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ ಎಂದು 1994ರಲ್ಲಿ ರಾಮನಗರದ ಜನತೆ ತಮಗೆ ನೀಡಿದ ಪ್ರೀತಿಯನ್ನು ಸ್ಮರಿಸಿದರು. ಬೆಂಗಳೂರಿನಲ್ಲಿ ಈಗಾಗಲೇ ಸಹಸ್ರಾರು ಸೈಟ್‌ಗಳು ಮತ್ತು ನಿರ್ಮಿಸಲಾದ ಮನೆಗಳು ಖಾಲಿ ಬಿದ್ದಿವೆ. ಅವುಗಳನ್ನು ಕೊಳ್ಳುವವರೇ ಇಲ್ಲದಿರುವಾಗ, ರೈತರ ಸಣ್ಣ ಜಮೀನುಗಳನ್ನು ಕಸಿದುಕೊಂಡು ಯಾರ ಓಲೈಕೆಗಾಗಿ ಟೌನ್‌ಶಿಪ್ ಮಾಡಲು ಹೊರಟಿದ್ದೀರಿ? ಪ್ರಶ್ನಿಸಿದರು. ಇದೇ ವೇಳೆ ಸಿಎಂ ಅವರು ಸಮಿತಿ ರಚಿಸುವ ಮುನ್ನ ಬೆಂಗಳೂರಿನ ಖಾಲಿ ಸೈಟ್‌ಗಳ ಅಂಕಿಅಂಶಗಳನ್ನು ಪರಿಶೀಲಿಸಲಿ ಎಂದು ಸಲಹೆ ನೀಡಿದರು.ಇದನ್ನೂ ಓದಿ:ತುಮಕೂರು | ಬರ ಪರಿಸ್ಥಿತಿ ಪರಿಶೀಲಿಸಿ ರೈತರ ಸಮಸ್ಯೆ ಆಲಿಸಿದ ಪರಮೇಶ್ವರ್

ನನಗೆ ವಯಸ್ಸಾಗಿದೆಯೇ ಹೊರತು ನನ್ನ ಬುದ್ಧಿಗೆ ವಯಸ್ಸಾಗಿಲ್ಲ. ಈ ಇಳಿವಯಸ್ಸಿನಲ್ಲೂ ರೈತರ ಪರವಾಗಿ ಹೋರಾಡುವ ಶಕ್ತಿ ನನಗಿದೆ. ಬಿಡದಿಯ ಕಿಂಚಿತ್ತೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ. ಅಲ್ಲದೇ ಆಗಸ್ಟ್ 19ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಸಭೆ ಕರೆಯಲಾಗಿದ್ದು, ರೈತರು ಮಾನಸಿಕವಾಗಿ ಹೋರಾಟಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು.

ಒಕ್ಕಲಿಗರು ಸಿಎಂ ಆದರೆ ದೇವೇಗೌಡರ ಕುಟುಂಬ ಸಹಿಸುವುದಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಇನ್ನೂ ಎರಡು ವರ್ಷ ಅಧಿಕಾರವಿದೆ, ಆಡಳಿತ ಮಾಡಿ, ನಮ್ಮದೇನೂ ತಕರಾರಿಲ್ಲ. ಯಾರು ಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದರೂ ಬೆಂಬಲಿಸುತ್ತೇವೆ ಎಂದರು.ಇದನ್ನೂ ಓದಿ: ರಾಂಚಿಯಲ್ಲಿ ಉಗ್ರ ರೂಪ ಪಡೆದ JPSC-JSSC ಪ್ರತಿಭಟನೆ – ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್

