ತುಮಕೂರು: ಶಿರಾ ತಾಲ್ಲೂಕಿನ ಕಾಗೆಲಿಂಗನಹಳ್ಳಿ ಹಾಗೂ ಮೇಲುಕುಂಟೆ ಗ್ರಾಮಗಳಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ (G Parameshwar) ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು. ಗ್ರಾಮಗಳಲ್ಲಿ ಬರದಿಂದ ಹಾನಿಗೊಳಗಾದ ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ರೈತರು ಮತ್ತು ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸಿದ ಡಿಸಿಎಂ ಪರಮೇಶ್ವರ, ಬರದಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮ ಮತ್ತು ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆದರು. ಈ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು.
ರೈತರ ಅಹವಾಲುಗಳನ್ನು ಆಲಿಸಿದ ಪರಮೇಶ್ವರ, ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಬರ ಪರಿಸ್ಥಿತಿಯಿಂದ ಜನರು ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಇದನ್ನೂ ಓದಿ: ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ; ಮೋಹನ್ ಭಾಗವತ್ ಹೇಳಿಕೆಗೆ RSS-ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ ಎಂದ ಹರಿಪ್ರಸಾದ್
ಶೇಂಗಾ ಬೆಳೆ ಪರಿಶೀಲನೆ
ಶಿರಾ ತಾಲ್ಲೂಕಿನ ಮೇಲುಕುಂಟೆ ಗ್ರಾಮದಲ್ಲಿ ಶೇಂಗಾ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿದ ಡಿಸಿಎಂ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಿತ್ತನೆ ಮಾಡಿ 45 ದಿನ ಕಳೆದಿದ್ದರೂ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ತೇವಾಂಶದ ಕೊರತೆ ಕಂಡುಬಂದಿದೆ. ಇದರಿಂದ ಶೇಂಗಾ ಬೆಳೆ ಕಾಳು ಕಟ್ಟದಿರುವುದು ಗಮನಕ್ಕೆ ಬಂದಿದೆ. ಫಸಲ್ ಭೀಮಾ ಯೋಜನೆಯಡಿ ವಿಮೆ ಕಟ್ಟಿದ್ದರೂ, ಬೆಳೆ ನಷ್ಟಕ್ಕೆ ಸಂಬಂಧಿಸಿದ ವಿಮೆ ಹಣ ಪಾವತಿಯಾಗದಿರುವ ಬಗ್ಗೆ ರೈತರು ಡಿಸಿಎಂ ಅವರ ಗಮನಕ್ಕೆ ತಂದರು.
ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿನ 42 ಗ್ರಾಮ ಪಂಚಾಯಿತಿಗಳ ಕಳೆದ ಮೂರು ವರ್ಷಗಳ ವಿಮೆ ಮಾಹಿತಿಯನ್ನು ನೀಡುವಂತೆ ಕೃಷಿ ಅಧಿಕಾರಿಗಳಿಗೆ ಡಿಸಿಎಂ ಜಿ. ಪರಮೇಶ್ವರ ಸೂಚಿಸಿದರು. ಇದನ್ನೂ ಓದಿ: ಟಿಬಿ ಡ್ಯಾಂ ಗೇಟ್ ಕೊಚ್ಚಿ ಹೋಗಿ ಇಂದಿಗೆ 2 ವರ್ಷ – ಈಗ 51 ಕೋಟಿ ವೆಚ್ಚದಲ್ಲಿ ಹೊಸ ರಕ್ಷಾಕವಚಗಳೊಂದಿಗೆ ಆಧುನೀಕರಣ

